ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು
![](https://raitapijagattu.com/wp-content/uploads/2024/12/MalaysianGreenDwarfHighYieldingCoconut-780x470.jpg)
Malaysian Green Dwarf Coconut : ತೆಂಗು-ಕಲ್ಪವೃಕ್ಷ ಎಂದೇ ಪ್ರಸಿದ್ಧ. ವಿಶ್ವದ 93 ದೇಶಗಳಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದರೂ ಏಷ್ಯನ್, ಫೆಸಿಫಿಕ್ ದೇಶಗಳಲ್ಲಿ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ತೆಂಗನ್ನು ಉಪಯುಕ್ತ ಸ್ಥಳಗಳಲ್ಲಿ ಅಲ್ಲದೇ, ಸಣ್ಣ ಹಿಡುವಳಿಯಲ್ಲಿಯೂ ಬೆಳೆಯುವ ಪ್ರಮುಖ ತೋಟದ ಬೆಳೆಗಳಲ್ಲಿ ಒಂದು.
ತೆಂಗನ್ನು ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದೆ. ಅಲ್ಲದೇ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಆಸ್ಸಾಂಗಳಲ್ಲಿಯೂ ಸಹ ತೆಂಗಿನ ಕೃಷಿಯಿದೆ.
ತೆಂಗು ತಳಿಗಳು
ತೆಂಗಿನಲ್ಲಿ ಮುಖ್ಯವಾಗಿ ಎತ್ತರವಾಗಿ ಬೆಳೆಯುವ ಮತ್ತು ಗಿಡ್ಡವಾಗಿ ಬೆಳೆಯುವ ತಳಿಗಳಿವೆ. ನಮ್ಮ ದೇಶದ ಪಶ್ಚಿಮ ತೀರದಲ್ಲಿ ಬೆಳೆಯುವ ತೆಂಗನ್ನು ಪಶ್ಚಿಮ ತೀರದ ಎತ್ತರದ ತಳಿಯೆಂದು; ಪೂರ್ವ ತೀರದಲ್ಲಿ ಬೆಳೆಯುವ ತೆಂಗನ್ನು ಪೂರ್ವ ತೀರದ ಎತ್ತರದ ತಳಿ ಎಂದು ಕರೆಯಲಾಗುತ್ತದೆ.
ಇನ್ನು ಗಿಡ್ಡ ತಳಿಯಲ್ಲಿ ಚೌಘಾಟ್ ಕಿತ್ತಲೆ ಬಣ್ಣದ ಗಿಡ್ಡ ತಳಿ, ಗಂಗಾ ಬೊಂಡಮ್ ಮತ್ತು ಮಲಯನ್ ಕುಳ್ಳನೆಯ ತಳಿಗಳಿವೆ. ಈ ಗಿಡ್ಡ ತಳಿಗಳು ಎಳೆನೀರಿಗಾಗಿ ಮತ್ತು ಸಂಕರಣ (ಹೈಬ್ರಿಡ್) ತಳಿಗಳನ್ನು ಉತ್ಪಾದಿಸಲು ಬೆಳೆಯಲಾಗುತ್ತಿದೆ. ನಮ್ಮ ದೇಶದಲ್ಲಿ ಎತ್ತರದ ಜಾತಿ ಮತ್ತು ಕುಳ್ಳನೆಯ ಜಾತಿಗಳ ವಿವಿಧ ಸಂಕರಣ ತಳಿಗಳನ್ನು ಬೆಳೆಯಲಾಗುತ್ತಿದೆ.
ಬಹುಬೇಡಿಕೆಯ ಮಲೇಷಿಯನ್ ಗ್ರೀನ್ ಡ್ವಾರ್ಫ್
ಅಲ್ಪಾವಧಿಯಲ್ಲಿ ಅಧಿಕ ಇಳುವರಿ ನೀಡುವ ಗಿಡ್ಡ (ಕುಬ್ಜ) ಹೃಬ್ರಿಡ್ ತೆಂಗಿನ ಸಸಿಗಳಿಗೆ ಇದೀಗ ಭಾರೀ ಬೇಡಿಕೆ ಇದೆ. ಸಸಿನೆಟ್ಟು ಮೂರರಿಂದ ಐದು ವರ್ಷದೊಳಗೆ ಗೊಂಚಲು ತುಂಬ ಫಲ ನೀಡುವ ಮಲೇಷಿಯನ್ ಗ್ರೀನ್ ಡ್ವಾರ್ಫ್ ಹೈಬ್ರಿಡ್ ತೆಂಗಿನ ತಳಿ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಕರಾವಳಿ ಭಾಗದ ಸಾಕಷ್ಟು ರೈತರು ಈ ತೆಂಗಿನ ಸಸಿಗಳನ್ನು ನೆಟ್ಟು ಫಲ ಪಡೆಯುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಈ ತಳಿ ಅಷ್ಟೊಂದು ಪ್ರಸಿದ್ಧ ಪಡೆದಿಲ್ಲ. ಕಳೆದ ವರ್ಷ ಸೆಪ್ಟೆಂಬರ್ 9ರಿಂದ 12ರ ವರೆಗೆ ನಡೆದ ಧಾರವಾಡ ಕೃಷಿ ಮೇಳದಲ್ಲಿ ಮಲೇಷಿಯನ್ ಗ್ರೀನ್ ಡ್ವಾರ್ಫ್ ತೆಂಗಿನ ಸಸಿ ಅನೇಕ ರೈತರ ಗಮನ ಸೆಳೆದಿತ್ತು.
ಮೂರೇ ವರ್ಷಕ್ಕೆ ಗೊಂಚಲು ಗೊಂಚಲು ಫಲ
ನಾಟಿ ತಳಿಯ ತೆಂಗಿನ ಸಸಿಗಳು ಫಲ ಕೊಡುವುದಕ್ಕೆ ಏನಿಲ್ಲವೆಂದರೂ ಏಳರಿಂದ ಎಂಟು ವರ್ಷಗಳು ಬೇಕು. ಆದರೆ, ಮಲೇಷಿಯನ್ ಗ್ರೀನ್ ಡ್ವಾರ್ಫ್ ತಳಿಯ ತೆಂಗಿನ ತಳಿಗೆ ಮೂರರಿಂದ ಐದು ವರ್ಷಕ್ಕೆಲ್ಲ ಮೈತುಂಬ ಫಲ ಕಂಗೊಳಿಸುತ್ತದೆ. ಪ್ರತಿ ಮರದಲ್ಲೂ ಗರಿಷ್ಠ ಎಂಟು ಗೊಂಚಲುಗಳಿದ್ದು; ಒಂದೊAದು ಗೊಂಚಲಿನಲ್ಲಿ ಗರಿಷ್ಠ 30 ತೆಂಗಿನಕಾಯಿಗಳು ಇರುತ್ತವೆ.
ಈ ಗಿಡ್ಡ ತಳಿಯ ಮರದ ಕಾಯಿಗಳನ್ನು ಎಳನೀರು, ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆ ಉದ್ದೇಶಕ್ಕಾಗಿ ಬಳಕೆ ಮಾಡಬಹುದು. ಒಂದು ಕಾಯಿಯಲ್ಲಿ 700 ರಿಂದ 800 ಎಂ.ಎಲ್ ಸಿಹಿಯಾದ ಎಳನೀರು ಸಿಗುತ್ತದೆ. ಒಂದು ಕಾಯಿ ಸುಮಾರು ಕಾಲು ಕೆ.ಜಿಯಷ್ಟು ತೂಕದ ಕೊಬ್ಬರಿ ಕೊಡುತ್ತದೆ.
ಒಂದು ಎಕರೆಯಲ್ಲಿ ನೂರು ಸಸಿ
ಮಲೇಷಿಯನ್ ಗ್ರೀನ್ ಡ್ವಾರ್ಫ್ ವಿಶೇಷ ತಳಿಯ ತೆಂಗಿನ ಮರವು 8 ರಿಂದ 10 ಅಡಿಗಳಷ್ಟು ಎತ್ತರ ಬೆಳೆಯುತ್ತದೆ. ಒಂದು ಎಕರೆ ಭೂಮಿಯಲ್ಲಿ 100 ತೆಂಗಿನ ಸಸಿಗಳನ್ನು ನೆಟ್ಟು ಬೆಳೆಸಬಹುದಾಗಿದೆ. ರೈತರು ಮೂರಿಂದ ಐದು ವರ್ಷಕ್ಕೆ ನಿರೀಕ್ಷೆಯಂತೆ ಫಲ ಪಡೆಯಬಹುದಾಗಿದೆ.
ಹುಬ್ಬಳ್ಳಿಯಿಂದ 10 ಕಿ.ಮೀ ದೂರದಲ್ಲಿರು ಚಳ್ಳಮಟ್ಟಿ ಕ್ರಾಸ್ನಲ್ಲಿರುವ (ಕಲಘಟಗಿ ತಾಲ್ಲೂಕು) ಎಸ್.ಎನ್.ಎಸ್.ಅರ್ಗಾನಿಕ್ಸ್ ಮತ್ತು ಗಾರ್ಡನ್ಸ್ನಲ್ಲಿ ಮಲೇಷಿಯನ್ ಗ್ರೀನ್ ಡ್ವಾರ್ಫ್ ತೆಂಗಿನ ಸಸಿ ಮಾರಾಟಕ್ಕಿದೆ. ಒಂದು ತೆಂಗಿನ ಸಸಿ ಬೆಲೆ ಕೇವಲ 250 ರೂಪಾಯಿ. ಹೆಚ್ಚಿನ ಮಾಹಿತಿಗಾಗಿ 93438 25448 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.