Cheese milk : ಗಿಣ್ಣದ ಹಾಲುಂಡ ಕರು ರೈತರಿಗೆ ತರುವುದು ಸಿರಿ
ಹೈನುಗಾರಿಕೆಯಲ್ಲಿ ಅಧಿಕ ಲಾಭ ಗಳಿಕೆಗೆ ಗಿಣ್ಣದ ಹಾಲಿನ ಮಹತ್ವ ತಿಳಿಯಿರಿ...
ಹಸುವಿನಿಂದ ಕರುಗಳಿಗೆ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ವರ್ಗಾವಣೆ ಮಾಡಬಲ್ಲ ಏಕಮಾತ್ರ ಮಾಧ್ಯಮ ಗಿಣ್ಣದ ಹಾಲು. ಇಂತಹ ಗಿಣ್ಣದ ಹಾಲನ್ನು ಸದ್ಭಳಕೆ ಮಾಡಿಕೊಳ್ಳುವುದು ಹೇಗೆ? ಅದರಿಂದ ಲಾಭ ಗಳಿಕೆ ಹೇಗೆ? ಕರುವಿನ ಬೆಳವಣಿಗೆಗೆ ಗಿಣ್ಣದ ಹಾಲಿನಂದಾಗುವ ಅನುಕೂಲಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ…
ಕರುವಿಗೆ ಗಿಣ್ಣದ ಹಾಲೇ ಶಕ್ತಿದಾಯಕ
ಸಾಮಾನ್ಯವಾಗಿ ಕರು ಹಾಕಿದ ನಂತರ ರಾಸುಗಳಲ್ಲಿ ಉತ್ಪತ್ತಿಯಾಗುವ ಮೊದಲ ಹಳದಿ ಬಣ್ಣದ ಹಾಲಿಗೆ ಗಿಣ್ಣದ ಹಾಲು ಅನ್ನುತ್ತೇವೆ. ತಾಯಿಂದ ಕರುಗಳಿಗೆ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ವರ್ಗಾವಣೆ ಮಾಡಬಲ್ಲ ಏಕಮಾತ್ರ ಮಾಧ್ಯಮ ಗಿಣ್ಣದ ಹಾಲು.
ಈ ಹಾಲು ಬೆಲೆ ಕಟ್ಟಲಾಗದ ಪ್ರಕೃತಿಯ ಕೊಡುಗೆ. ಗಿಣ್ಣದ ಹಾಲು ಹಳದಿ ಬಣ್ಣ, ದಪ್ಪ ಮತ್ತು ಕೆನೆ ಸ್ಥಿರತೆ ಹೊಂದಿರುತ್ತದೆ. ಇದರಲ್ಲಿ ಅಧಿಕವಾಗಿ ಪ್ರೋಟೀನ ಅಂಶ, ಪೋಷಕಾಂಶಗಳು ಹಾಗೂ ರೋಗ ನಿರೋಧಕ ಪ್ರತಿಕಾಯಗಳು ಹೊಂದಿರುತ್ತವೆ. ಇದರಿಂದ ಆರಂಭಿಕ ಹಂತದಲ್ಲಿ ರೋಗದ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.
ಇದನ್ನೂ ಓದಿ: Increase in KMF milk incentive to farmers : ಹೊಸ ವರ್ಷಕ್ಕೆ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹಧನ ಹೆಚ್ಚಳ
ರೋಗ ನಿರೋಧಕ ಶಕ್ತಿಗೆ ದಿವೌಷಧಿ
ನವಜಾತ ಕರುಗಳಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದು ಈ ಹಾಲನ್ನು ಅರ್ಧ ಗಂಟೆ ಒಳಗೆ ಕುಡಿಸುವ ಮೂಲಕ ಕರುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದಾಗಿದೆ. ಕರುಗಳ ದೇಹದ ತೂಕದ 10 ಪ್ರತಿಶತರಷ್ಟು ಗಿಣ್ಣದ ಹಾಲು ಜನಿಸಿದ 24 ಗಂಟೆಯೊಳಗೆ ಕುಡಿಸಬೇಕು. ಇದರಲ್ಲಿ ಜನಿಸಿದ ಒಂದು ಗಂಟೆ ಒಳಗೆ ಮೊದಲನೇ ಭಾಗವನ್ನು ಕುಡಿಸಬೇಕು. ನಂತರ 12 ಗಂಟೆ ಒಳಗೆ ಮತ್ತು 24 ಗಂಟೆ ಒಳಗೆ ಮತ್ತೊಂದು ಭಾಗ ದಿನದ ಹಾಲು ಕುಡಿಸಬೇಕು. ಈ ಹಾಲು ಮೂರು ದಿನಗಳ ತನಕ ಕುಡಿಸಬೇಕು.
ಗಿಣ್ಣದ ಹಾಲಿನಲ್ಲಿ ಅತ್ಯಗತ್ಯವಿರುವ ಅಮೈನೋ ಆಮ್ಲಗಳು ಹೆಚ್ಚಾಗಿ ಇರುತ್ತವೆ. ಇದರಿಂದ ದೇಹದಲ್ಲಿ ಪ್ರೋಟೀನ್ ಮತ್ತು ಪ್ರತಿರಕ್ಷಣಾ ಕಾಯ ನಿರ್ಮಾಣ ಕಾಲದಲ್ಲಿ ಕಾರ್ಯದಲ್ಲಿ ಉಪಯುಕ್ತವಾಗುತ್ತದೆ. ಗಿಣ್ಣದ ಹಾಲಿನಲ್ಲಿ ಕಾರ್ಬೋಹೈಡ್ ಪ್ರಮಾಣವು ಹೆಚ್ಚಾಗಿ ಕಂಡುಬರುತ್ತದೆ. ನೀರು ಮಿಶ್ರಿತ ಹಾಗೂ ಕೊಬ್ಬು ಮಿಶ್ರಿತ ವಿಟಮಿನ್‌ಗಳಾದ ಎ, ಡಿ, ಈ, ಕೆ ಮತ್ತು ಬಿ ವಿಟಾಮಿನ್ ಜಾಸ್ತಿ ಇರುತ್ತದೆ ಇದರಿಂದ ಮೂಳೆ ಬೆಳವಣಿಗೆ ಅಂತರಿಕ ಚಯಪಚಾಯ ಕ್ರಿಯೆಗಳಿಗೆ ಉಪಯುಕ್ತವಾಗಿರುತ್ತದೆ.
ಇದನ್ನೂ ಓದಿ: Crop Insurance Karnataka Status Check : ಮೊಬೈಲ್‌ನಲ್ಲೇ ಚೆಕ್ ಮಾಡಿ ಬೆಳೆವಿಮೆ ಪರಿಹಾರ | ಇಲ್ಲಿದೆ ಸರಳ ವಿಧಾನ
9-10 ತಿಂಗಳಲ್ಲಿ ಕರುಗಳು ಪ್ರೌಢಾವಸ್ಥೆಗೆ
ಸಾದಾ ಹಾಲಿಗೆ ಹೋಲಿಸಿದರೆ ನಾಲ್ಕರಿಂದ ಐದು ಪಟ್ಟು ಪ್ರೋಟೀನ್, 10 ಪಟ್ಟು ಜೀವಸತ್ವಗಳು ಹಾಗೂ ಮೂರು ಪಟ್ಟು ಹೆಚ್ಚು ಪ್ರತಿಕಾಯಗಳನ್ನು ಗಿಣ್ಣದ ಹಾಲು ಹೊಂದಿರುತ್ತದೆ. ನವಜಾತ ಕರುಗಳಲ್ಲಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಪ್ರತಿಕಾಯಗಳು ನೇರವಾಗಿ ರಕ್ತಕ್ಕೆ ಹಾದು ಹೋಗಲು 24 ಗಂಟೆಗಳು ಬೇಕಾಗುತ್ತದೆ. ತದನಂತರ ಕರಳಿನಲ್ಲಿ ಪ್ರತಿಕಾಯಗಳು ಹೀರುವುದಿಲ್ಲ. ಆದ್ದರಿಂದ ಗಿಣ್ಣದ ಹಾಲು ಆದಷ್ಟು ಬೇಗನೆ ಕುಡಿಸಬೇಕು.
ಗಿಣ್ಣದ ಹಾಲು ಕರುಗಳಿಗೆ ಕುಡಿಸುವುದರಿಂದ ಮೊದಲನೇ ಮಲ ವಿಸರ್ಜನೆಗೆ ಸಹಾಯಕವಾಗಿರುವಂತಹ ಪದಾರ್ಥಗಳನ್ನು ಇದು ಹೊಂದಿರುವದರಿAದ ಕರುಳಿನ ಕಲ್ಮಶಗಳನ್ನು ಹೊರಗೆ ಹಾಕಲು ಉಪಯೋಗವಾಗಿದೆ. ಜೀರ್ಣಾಂಗ ವ್ಯವಸ್ಥೆ ಪ್ರಾರಂಭವಾಗಲು ಗಿಣ್ಣದ ಹಾಲು ಸಹಕಾರಿಯಾಗಿದೆ.
ಗಿಣ್ಣದ ಹಾಲು ಚೆನ್ನಾಗಿ ಕುಡಿಸಿದರೆ 9 ರಿಂದ 10 ತಿಂಗಳಲ್ಲಿ ಕರುಗಳು ಪ್ರೌಢಾವಸ್ಥೆಗೆ ಬರುತ್ತವೆ. ಈ ಹಾಲಿನಿಂದ ಕರುಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಇದರಿಂದ ಸೂಕ್ಷ್ಮಾಣು ಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಹಾಗೂ ಕರುಗಳಲ್ಲಿ ಮಾರಣಾಂತಿಕ ರೋಗಗಳ ಅಪಾಯ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Free Training : ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ತರಬೇತಿ | ವಸತಿ, ಉಟೋಪಚಾರ ಸಂಪೂರ್ಣ ಉಚಿತ
ಬೆಳವಣಿಗೆಗೆ ಪೂರಕ
ಗಿಣ್ಣದ ಹಾಲು ಕುಡಿದ ಕರುಗಳು ಚೆನ್ನಾಗಿ ಬೆಳವಣಿಗೆ ಹೊಂದುತ್ತವೆ. ಗಿಣ್ಣದ ಹಾಲು ನಿಗದಿತ ಪ್ರಮಾಣದಲ್ಲಿ ಕುಡಿಸಬೇಕು. ಒಂದು ವೇಳೆ ಹೆಚ್ಚಾಗಿ ಕುಡಿಸಿದರೆ ಕರುಗಳಲ್ಲಿ ಬೇಧಿ ಉಂಟಾಗುತ್ತದೆ. ಕಡಿಮೆ ಕುಡಿಸಿದರೆ ಕರುಗಳಲ್ಲಿ ಬೆಳವಣಿಗೆ ಕುಂಠಿತವಾಗುವುದಲ್ಲದೆ ರೋಗ ನಿರೋಧಕ ಶಕ್ತಿ ಕೂಡ ಕುಂದುತ್ತದೆ.
ಕೆಲವೊಮ್ಮೆ ಅನಾಥ ಕರುಗಳಿಗೆ ಗಿಣ್ಣದ ಹಾಲು ಸಿಗದಿದ್ದರೆ ವಾಣಿಜ್ಯವಾಗಿ ಸಿಗುವ ಗಿಣ್ಣದ ಹಾಲಿನ ಪೌಡರ್ ಕೂಡ ಬಳಸಬಹುದು. ಹೈನುಗಾರಿಕೆಯಲ್ಲಿ ಕೆಲವೊಮ್ಮೆ ಗಿಣ್ಣದ ಹಾಲು ಕೊಡುವ ರಾಸುಗಳುಗಳಿಂದ ಹಾಲನ್ನು ಸಂಗ್ರಹಿಸಿ ಘನಿಕರಿಸಿ ತದನಂತರ ಕರುಗಳಿಗೆ ಕುಡಿಸಬೇಕಾದರೆ ಬೆಚ್ಚಗೆ ಮಾಡಿ ಕುಡಿಸಬಹುದು.
ಎಮ್ಮೆ ಕರುಗಳಲ್ಲಿ ರೋಗ ನಿರೋಧಕ ಶಕ್ತಿ ಬಹಳ ದುರ್ಬಲವಾಗಿರುತ್ತದೆ ಮತ್ತು ಎಮ್ಮೆ ಹಾಲಿನಲ್ಲಿ ಕೆಲವೊಮ್ಮೆ ಜಂತು ಹುಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಏಳು ತಿಂಗಳ ಎಮ್ಮೆಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಬೇಕು ಹಾಗೂ ನವಜಾತ ಕರುವಿಗೆ ಮೂರು ದಿನಗಳಲ್ಲಿ ಜಂತುನಾಶಕ ಔಷಧಿಯನ್ನು ಕುಡಿಸಬೇಕು.
ಹುಟ್ಟಿದ 15 ನಿಮಿಷದೊಳಗಾಗಿ ಗಿಣ್ಣದ ಹಾಲು ಕುಡಿದ ಕರುಗಳು ಬಹು ಬೇಗನೆ ಬೆಳೆಯುತ್ತವೆ. ಹೆಣ್ಣು ಕರುಗಳು 10 ತಿಂಗಳ ಅವಧಿಗೆ ಬೆದೆಗೆ ಬರುತ್ತವೆ. ಗಂಡು ಕರುಗಳು ಬಹು ಬೇಗನೆ ಪ್ರೌಢಾವಸ್ಥೆಗೆ ಬರುತ್ತವೆ. ಆದ್ದರಿಂದ ಗಿಣ್ಣದ ಹಾಲು ಕುಡಿಸುವ ವಿಷಯದಲ್ಲಿ ನಿರ್ಲಕ್ಷ ಸಲ್ಲ. ಕಾಯಿಸಿದ ಗಿಣ್ಣದ ಹಾಲು ಮಕ್ಕಳಿಗೂ ಸಹ ಪೌಷ್ಟಿಕ ಆಹಾರವಾಗಿದೆ.
ಡಾ. ತೃಪ್ತಿ ಸೂರ್ಯಕಾಂತ ಕಟ್ಟಿಮನಿ, ಪಶುವೈದ್ಯರು