Bhagyalakshmi Bond Money-ಭಾಗ್ಯಲಕ್ಷ್ಮಿ ಯೋಜನೆಯ ಹಣ ಜಮಾ
18 ವರ್ಷ ತುಂಬಿದ ಹೆಣ್ಣುಮಕ್ಕಳ ಖಾತೆಗೆ ಹಣ ಸಂದಾಯ

ರಾಜ್ಯದಲ್ಲಿ 18 ವರ್ಷ ಪೂರೈಸಿದ 2.30 ಲಕ್ಷ ಹೆಣ್ಣು ಮಕ್ಕಳಿಗೆ ಬಾಂಡ್ ಹಣ ಜಮಾ ಮಾಡಲಾಗುತ್ತಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಫಲಾನುಭವಿಗಳಿಗೆ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುತ್ತಿದೆ. ಈಗಾಗಲೇ ಶೇ.10ರಷ್ಟು ಫಲಾನುಭವಿಗಳಿಗೆ ಹಣ ಜಮೆಯಾಗಿದೆ. ಉಳಿದವರಿಗೂ ಹಂತ ಹಂತವಾಗಿ ಹಣ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿದೇರ್ಶಕರು ತಿಳಿಸಿದ್ದಾರೆ.
2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದ ಫಲಾನುಭವಿಗಳಿಗೆ ಇದೀಗ 18 ವರ್ಷ ಪೂರ್ಣಗೊಂಡಿರುವುದರಿ೦ದ ಎಲ್‌ಐಸಿಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ. ಇಲಾಖೆ ಈಗಾಗಲೇ ಎಲ್ಲಾ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಹಣ ರವಾನಿಸುವ ವ್ಯವಸ್ಥೆ ಮಾಡುತ್ತಿದೆ.
ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಪದ್ಧತಿ ತಡೆಯುವುದು ಹಾಗೂ ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯಮಟ್ಟ ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆರಂಭದಲ್ಲಿ ಎಲ್‌ಐಸಿಯಲ್ಲಿ ನಿಶ್ಚಿತ ಠೇವಣಿ ಇಟ್ಟು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಹಣ ನೀಡುವ ಗುರಿ ಈ ಯೋಜನೆಯದ್ದಾಗಿತ್ತು. ಇದೀಗ ಠೇವಣಿ ಮೊತ್ತವನ್ನು ಅಂಚೆ ಇಲಾಖೆಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: 500 ರೂಪಾಯಿಗೆ 10 ಲಕ್ಷ ವಿಮೆ ಪರಿಹಾರ | ಅಂಚೆ ಇಲಾಖೆಯ ಈ ಅವಕಾಶ ಮಿಸ್ ಮಾಡದೇ ಬಳಸಿಕೊಳ್ಳಿ…
ಏನಿದು ಭಾಗ್ಯಲಕ್ಷ್ಮಿ ಯೋಜನೆ?
ರಾಜ್ಯದಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು ಅನುಷ್ಠಾನಗೊಳಿಸಿದ ವಿಶೇಷ ಯೋಜನೆ ಇದು. 2006-07ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವಧಿಯಲ್ಲಿ ಜಾರಿಗೊಂಡಿರುವ ಈ ಯೋಜನೆಯಡಿ ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಹೆಣ್ಣು ಮಗು ಜನಿಸಿದರೆ ಆ ಮಗುವಿನ ಮದುವೆ ವೆಚ್ಚಕ್ಕೆ ಹಣ ಸಿಗಲಿದೆ.
ಭಾರತೀಯ ಜೀವವಿಮಾ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗಿದ್ದ ‘ಭಾಗ್ಯಲಕ್ಷ್ಮಿ’ ಯೋಜನೆಯನ್ನು ಕೆಲವು ಆಡಳಿತಾತ್ಮಕ ಕಾರಣಗಳಿಂದ 2020-21ನೇ ಸಾಲಿನಿಂದ ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ ಖಾತೆ ಯೋಜನೆ’ಯ ಮೂಲಕ ಅನುಷ್ಠಾನಗೊಳಿಸಲಾಗಿದೆ. ಮಾತ್ರವಲ್ಲ ‘ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿಖಾತೆ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ.
ಮೆಚ್ಯೂರಿಟಿ ಮೊತ್ತವನ್ನು ಕ್ಲೈಮ್ ಮಾಡಲು ಅರ್ಹತೆಗಳೇನು?
18 ವರ್ಷದ ಹಿಂದೆ ನೋಂದಣಿ ಮಾಡಿದ ಬಾಲಕಿಗೆ ಇದೀಗ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಹುಡುಗಿಯ ಕನಿಷ್ಠ ವಿದ್ಯಾರ್ಹತೆ 8ನೇ ತರಗತಿಯಾಗಿರಬೇಕು. ಹಕ್ಕು ಪಡೆಯುವ ಸಮಯದಲ್ಲಿ ಹುಡುಗಿ ಮದುವೆಯಾಗಿರಬಾರದು. ಇಂಥವರಿಗೆ ಇದೀಗ ಯೋಜನೆಯ ಪ್ರಯೋಜನ ಸಿಗಲಿದ್ದು; ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ