Sashakt Panchayat Netri Abhiyan- ಗ್ರಾಮ ಪಂಚಾಯತಿಗಳಲ್ಲಿ ಇನ್ನು ಗಂಡಂದಿರ ದರ್ಬಾರ್ ಬಂದ್
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ...

ಗ್ರಾಮ ಪಂಚಾಯತಿಗಳಲ್ಲಿ (Gram panchayat) ಮಹಿಳಾ ಅಧ್ಯಕ್ಷೆ ಮತ್ತು ಸದಸ್ಯೆಯರ ಗಂಡ ಅಥವಾ ಮಗ ಅಕ್ರಮವಾಗಿ ದರ್ಬಾರು ನಡೆಸುವ ಪರಿಪಾಠಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೊಳಿಸಿದೆ…
ಗ್ರಾಮ ಪಂಚಾಯತಿಗಳಿಗೆ ಚುನಾಯಿತರಾಗುವ ಮಹಿಳಾ ಅಧ್ಯಕ್ಷರು ಮತ್ತು ಮಹಿಳಾ ಸದಸ್ಯರ ಹೆಸರಿನಲ್ಲಿ ಅವರ ಪತಿ, ಮಗ ಆಡಳಿತ ನಡೆಸುವ ಪರಿಪಾಠಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆ ಸಶಕ್ತವಾಗಿ ಜಾರಿಯಾದರೆ ಇನ್ಮುಂದೆ ಗ್ರಾಮ ಪಂಚಾಯತಿಗಳಲ್ಲಿ ಗಂಡಂದಿರ ದರ್ಬಾರಿಗೆ ಅಂಕುಶ ಬೀಳಲಿದೆ.
ಇದನ್ನೂ ಓದಿ: Rover survey-ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ
ಸಶಕ್ತ ಪಂಚಾಯತ್ ನೇತ್ರಿ ಅಭಿಯಾನ
ಹೌದು, ಮಹಿಳಾ ಗ್ರಾಮ ಪಂಚಾಯತಿ ಅಧ್ಯಕ್ಷೆಯರು ಮತ್ತು ಸದಸ್ಯೆಯರು ಆಡಳಿತ ನಡೆಸುವಂತೆ ಸಶಕ್ತರನ್ನಾಗಿಸಲು ‘ಸಶಕ್ತ ಪಂಚಾಯತ್ ನೇತ್ರಿ ಅಭಿಯಾನ’ (Sashakt Panchayat Netri Abhiyan) ಹೆಸರಿನ ಈ ಹೊಸ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಕಳೆದ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಯದಲ್ಲೇ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ಸದರಿ ಕಾರ್ಯಕ್ರಮದಲ್ಲಿ ಮಹಿಳಾ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯೆಯರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ತರಬೇತಿ ನೀಡಲಾಗುತ್ತದೆ.
‘ಸಶಕ್ತ ಪಂಚಾಯತ್ ನೇತ್ರಿ ಅಭಿಯಾನ’ದಡಿ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು ಮಹಿಳಾ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯೆಯರಿಗೆ ಗ್ರಾಮಗಳಲ್ಲಿರುವ ಹೆಣ್ಣುಮಕ್ಕಳು ಮತ್ತು ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣದ ಕುರಿತಾದ ವಿಶೇಷ ತರಬೇತಿ ನೀಡಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ 1,200ಕ್ಕೂ ಹೆಚ್ಚು ಮಹಿಳಾ ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಿದ್ದರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಮತ್ತೆ ಹಳೇ ಪಿಂಚಣಿ ಗಿಫ್ಟ್ | ಒಪಿಎಸ್ ಮರುಜಾರಿಗೆ ಸಿದ್ಧತೆ
ಸಹಿ-ಸಭೆಗೆ ಸೀಮಿತವಾದ ಮಹಿಳೆಯರು
ದೇಶಾದ್ಯಂತ 2.5 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಿವೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ 7ರಿಂದ 31 ಸದಸ್ಯರಿದ್ದಾರೆ. ಒಂದೊ೦ದು ಗ್ರಾಮ ಪಂಚಾಯತಿಯಲ್ಲಿ ಸರಾಸರಿ 19 ಸದಸ್ಯರು ಇದ್ದಾರೆ ಎಂದು ಭಾವಿಸಿದರೂ ಪ್ರತಿ ಗ್ರಾಮ ಪಂಚಾಯತಿಯಲ್ಲಿ 6 ಮಹಿಳಾ ಸದಸ್ಯರಂತೆ ದೇಶದಲ್ಲಿ ಒಟ್ಟು 1.5 ಲಕ್ಷ ಮಹಿಳಾ ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ.
ಇಷ್ಟು ಪ್ರಮಾಣದ ಮಹಿಳಾ ಸದಸ್ಯೆಯರ ಪೈಕಿ ಅರ್ಧದಷ್ಟು ಕೂಡ ಚುನಾಯಿತ ಮಹಿಳೆಯರು ಆಡಳಿತ ನಡೆಸುತ್ತಿಲ್ಲ. ಸಹಿ-ಸಭೆಗೆ ಮಾತ್ರ ಸೀಮಿತವಾಗಿರುವ ಮಹಿಳಾ ಗ್ರಾಮ ಪಂಚಾಯತಿ ಸದಸ್ಯರು ಖುದ್ದು ನಿರ್ವಹಿಸಬೇಕಾದ ಅಧಿಕಾರವನ್ನು ಆಕೆ ಗಂಡ ಅಥವಾ ಮಗ ಅನುಭವಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯವೂ ಸೇರಿದಂತೆ ದೇಶಾದ್ಯಂತ ಅನೇಕ ಅಪಸ್ವರಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ
ಪಂಚಾಯತ್ ರಾಜ್ ಸಲಹಾ ಸಮಿತಿ ಶಿಫಾರಸು
ಈ ಹಿನ್ನಲೆಯಲ್ಲಿ ಇತ್ತೀಚೆಗೆ ಪಂಚಾಯತ್ ರಾಜ್ ಸಚಿವಾಲಯದ (ministry of panchayati raj) ಸಲಹಾ ಸಮಿತಿಯು ಮಹಿಳಾ ಗ್ರಾಮ ಪಂಚಾಯತಿ ಸದಸ್ಯರ ಹೆಸರಿನಲ್ಲಿ ಅವರ ಗಂಡ ಅಧಿಕಾರ ನಡೆಸುವುದನ್ನು ತಪ್ಪಿಸಲು ದೊಡ್ಡ ಮೊತ್ತದ ದಂಡ ವಿಧಿಸುವಂತೆ ಶಿಫಾರಸು ಮಾಡಿತ್ತು. ಅದೇ ಸಮಿತಿಯು ಮಹಿಳಾ ಗ್ರಾಮ ಪಂಚಾಯತಿ ಸದಸ್ಯರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ತರಬೇತಿ ನೀಡುವ ಬಗ್ಗೆಯೂ ಸಲಹೆ ನೀಡಿತ್ತು. ಅದರಂತೆ ಈಗ ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
ದೇಶದ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿಗಳಲ್ಲಿ ಶೇ.33ರಷ್ಟು ಮಹಿಳೆಯರಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ 33% ಮಹಿಳಾ ಮೀಸಲಾತಿ ಇರುವುದರಿಂದ ಕಡ್ಡಾಯವಾಗಿ ಮಹಿಳೆಯರು ಆಯ್ಕೆಯಾಗುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಬೇರು ಬಿಟ್ಟಿರುವ ಪುರುಷ ಪ್ರಧಾನ ಮನಸ್ಥಿತಿಯಿಂದಾಗಿ ಅವರ ಪತಿ ಅಥವಾ ಮಗನೇ ಅಧಿಕಾರ ಚಲಾಯಿಸುವ ನಿದರ್ಶನಗಳು ಹೆಚ್ಚು ಕಂಡುಬರುತ್ತಿವೆ. ಇನ್ನು ಮುಂದಾದರೂ ಇವರ ದರ್ಬಾರಿಗೆ ಕೊನೆ ಬೀಳುತ್ತಾ? ಕಾದು ನೋಡಬೇಕಿದೆ.
Bapuji Seva Kendra Services : ಗ್ರಾಮ ಪಂಚಾಯತಿಯಲ್ಲೇ ಸಿಗಲಿವೆ ಎಲ್ಲ ಸರಕಾರಿ ಸೇವೆಗಳು