Agricultural Loan Information for Farmers : ಸರ್ಕಾರಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳು (Financial Institutions) ರೈತರಿಗೆ ನೆರವಾಗಲು ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಒದಗಿಸುತ್ತವೆ. ಹಲವು ರೀತಿಯ ಕೃಷಿಸಾಲಗಳು (Agriculture Loan) ಲಭ್ಯವಿದ್ದು; ಪ್ರತಿಯೊಂದು ಸಾಲಕ್ಕೂ ತನ್ನದೇ ಆದ ಅರ್ಹತಾ ಮಾನದಂಡಗಳು, ಬಡ್ಡಿದರಗಳು ಹಾಗೂ ಮರುಪಾವತಿ ಕಾಲಮಿತಿಗಳಿವೆ.
ಹಾಗಾದರೆ ಕೃಷಿ ಸಾಲ ಪಡೆದುಕೊಳ್ಳುವುದು ಹೇಗೆ? ಈ ಸಾಲಕ್ಕೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ? ಕೃಷಿ ಸಾಲ ಪಡೆಯಲು ಅರ್ಹತೆಗಳೇನು? ಯಾವೆಲ್ಲ ದಾಖಲೆಗಳು ಬೇಕು? ಮುಂತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಇದನ್ನೂ ಓದಿ: ಇನ್ಮುಂದೆ ಈ ರೈತರ ಭೂಮಿ ಮಾರುವಂತಿಲ್ಲ, ಯಾರೂ ಖರೀದಿಸುವಂತೆಯೂ ಇಲ್ಲ | ಬಂತು ಹೊಸ ಕಾಯ್ದೆ PTCL Act Amendment
ಕೃಷಿ ಸಾಲಕ್ಕೆ ಬಡ್ಡಿದರವೆಷ್ಟು?
ದೇಶದಲ್ಲಿನ ವಿವಿಧ ಹಣಕಾಸು ಸಂಸ್ಥೆಗಳು, ಬ್ಯಾಂಕ್ಗಳಿಗೆ ಹೊಂದಿಕೊ೦ಡು ಕೃಷಿ ಸಾಲಕ್ಕೆ ವಿಧಿಸುವ ಬಡ್ಡಿ ದರದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಮಾತ್ರವಲ್ಲ ಸಾಲ ಪಡೆದುಕೊಳ್ಳುವವರ ಪ್ರೊಫೈಲ್, ಅರ್ಹತೆ ಮತ್ತು ಉದ್ದೇಶಗಳು ಕೂಡ ಬಡ್ಡಿದರದ ಮೇಲೆ ಪರಿಣಾಮ ಬೀರುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ವಿಧಿಸುವ ಕೃಷಿ ಸಾಲಗಳ ಮಾರ್ಗಸೂಚಿಗಳ ಅನ್ವಯ ವಾಣಿಜ್ಯ ಸಾಲಗಳಿಗೆ ಹೋಲಿಸಿದರೆ ಕೃಷಿ ಸಾಲದ ಬಡ್ಡಿದರಗಳು ಕಡಿಮೆ ಇರುತ್ತವೆ.
ಸಾಮಾನ್ಯವಾಗಿ ಮರುಪಾವತಿ ಅವಧಿಯನ್ನು ಅವಲಂಬಿಸಿ ವರ್ಷಕ್ಕೆ ಶೇ. 4ರಿಂದ ಶೇ.14ರ ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಸಹಕಾರ ಸಂಸ್ಥೆಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ, ಅಂದರೆ ಬಡ್ಡಿ ಇಲ್ಲದೇ ಲಕ್ಷಾಂತರ ರೂಪಾಯಿ ಕೃಷಿ ಸಾಲ ಸಿಗುತ್ತದೆ.
ಕೃಷಿಸಾಲ ಪಡೆಯಲು ಅರ್ಹತೆಗಳೇನು?
- ಮೊದಲನೆಯದಾಗಿ ಕೃಷಿ ಸಾಲ ಪಡೆಯಲು ರೈತರು ಕೃಷಿ ಭೂಮಿಯ ಸ್ಪಷ್ಟ ಮಾಲೀಕತ್ವವನ್ನು ಹೊಂದಿರಬೇಕು.
- ಯಾವುದೇ ಹಣಕಾಸು ಸಂಸ್ಥೆಗಳು ಸಾಲ ಒದಗಿಸಲು ಅರ್ಜಿದಾರರ ಕ್ರೆಡಿಟ್ ಇತಿಹಾಸವನ್ನು (Credit History) ಮಾನದಂಡವನ್ನಾಗಿ ಬಳಸುವುದರಿಂದ ಉತ್ತಮ ಕ್ರೆಡಿಟ್ ಸ್ಕೋರ್ ಅಗತ್ಯ.
- ಕೆಲವು ಬ್ಯಾಂಕುಗಳು ಕೃಷಿ ಸಾಲ ನೀಡಲು ಅರ್ಜಿದಾರರು ಕೃಷಿಯಲ್ಲಿ ಕನಿಷ್ಠ ವರ್ಷಗಳ ಅನುಭವವನ್ನು ಹೊಂದಿರಬೇಕು ಎಂಬ ಷರತ್ತು ವಿಧಿಸುವುದಿದೆ.
- ಬ್ಯಾಂಕುಗಳು ನಿರ್ದಿಷ್ಟ ಮಿತಿ ಅಂದರೆ 1.6 ಲಕ್ಷ ರೂಪಾಯಿ ವರೆಗಿನ ಸಾಲಗಳಿಗೆ ಭೂಮಿಯ ಆಧಾರ ಸಲ್ಲಿಸುವಂತೆ ಒತ್ತಾಯಿಸುವುದಿಲ್ಲ. ಇದಕ್ಕಿಂತ ಹೆಚ್ಚು ಸಾಲ ಬೇಕಾದರೆ ಕೃಷಿ ಭೂಮಿಯನ್ನು ಅಡಮಾನ ಇಡಲು ಕೇಳಲಾಗುತ್ತದೆ.
- ಸಾಲದ ಅರ್ಜಿಯ ಜತೆಗೆ ಗುರುತಿನ ಪುರಾವೆ, ವಿಳಾಸ ಪುರಾವೆ, ಭೂ ಮಾಲೀಕತ್ವದ ದಾಖಲೆಗಳು, ಆದಾಯ ಪ್ರಮಾಣ ಪತ್ರಗಳು, ಬ್ಯಾಂಕ್ ಸ್ಟೇಟ್ಮೆಂಟ್ ಸೇರಿದಂತೆ ಇತರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಕೃಷಿ ಸಾಲ ನೀಡುವ ಬ್ಯಾಂಕುಗಳು
ಕೃಷಿ ಸಾಲದ ವಹಿವಾಟುಗಳು ಬಹುತೇಕ ಸಹಕಾರ ಬ್ಯಾಂಕುಗಳಲ್ಲಿಯೇ ನಡೆಯುವುದುಂಟು. ರೈತರ ಕೃಷಿ ಚಟುವಟಿಕೆಗೆ ನೆರವಾಗಲೆಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳು, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿ೦ದ (ಡಿಸಿಸಿ) ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.
ಕೃಷಿ ಚಚುವಟಿಕೆಗಳಿಗೆ ಮಾತ್ರವಲ್ಲದೇ, ಕೃಷಿ ಉಪಕಸುಬುಗಳಾದ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಹಾಗೂ ರೇಷ್ಮೆ ಶೆಡ್ ನಿರ್ಮಾಣಕ್ಕೂ ಸಾಲ ಸಿಗುತ್ತದೆ. ಈಚೆಗೆ ಸರ್ಕಾರ ಸಹಕಾರ ಸಂಘಗಳು ನೀಡುವ ಕೃಷಿಸಾಲ ಮಿತಿ ಹೆಚ್ಚಳ ಕೂಡ ಮಾಡಿದೆ.
ಇದಲ್ಲದೇ ರಾಷ್ಟ್ರೀಕೃತ ಬ್ಯಾಂಕುಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಹ ವಿವಿಧ ರೀತಿಯ ಕೃಷಿ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಕೃಷಿ ಪೂರಕ ಸಾಲ ಯೋಜನೆಗೂ ಈ ಬ್ಯಾಂಕುಗಳು ಕೊಂಡಿಯಾಗಿವೆ.
ಇದನ್ನೂ ಓದಿ: ರೈತರಿಗೆ ಮೊಬೈಲ್’ನಲ್ಲೇ ಉಚಿತ ಮಾರುಕಟ್ಟೆ ಒದಗಿಸುವ ಕೃಷಿ ಸೆಂಟ್ರಲ್ Krishi Central App
ಬಡ್ಡಿದರ ಹೋಲಿಸಿ ಸಾಲಕ್ಕೆ ಅರ್ಜಿ ಹಾಕಿ…
ಸಹಕಾರಿ ಬ್ಯಾಂಕುಗಳಲ್ಲಿ ಸದ್ಯಕ್ಕೆ ಅರ್ಹ ರೈತರಿಗೆ 5 ಲಕ್ಷ ರೂಪಾಯಿ ವರೆಗೂ ಶೂನ್ಯ ಬಡ್ಡಿ ಸಾಲ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಬಹುತೇಕ ಸಹಕಾರಿ ಬ್ಯಾಂಕುಗಳು ಈ ಮಿತಿಯಲ್ಲಿ ರೈತರಿಗೆ ಇನ್ನೂ ಶೂನ್ಯ ಬಡ್ಡಿ ಸಾಲ ನೀಡುತ್ತಿಲ್ಲ.
ಇನ್ನು ವಿವಿಧ ಬ್ಯಾಂಕು, ಹಣಕಾಸು ಸಂಸ್ಥೆಗಳಲ್ಲಿ ವಿಧಿಸಲಾಗುವ ಬಡ್ಡಿದರವು ಸಾಕಷ್ಟು ಹೋಲಿಕೆ ಇದ್ದು; ಸಾಮಾನ್ಯಕ್ಕಿಂತ ಕಡಿಮೆ ಬಡ್ಡಿದರ ಇರುವ, ರೈತರ ಅನುಕೂಲಕ್ಕೆ ತಕ್ಕಷ್ಟು ಮರುಪಾವತಿಗೆ ಸಮಯ ನೀಡುವ ಸಾಲವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನಕ್ಕೆ ನಿರ್ಬಂಧ | ಆಹಾರ ಸಚಿವರ ಸೂಚನೆ New ration card application restriction