Coconut Farming : ತೆಂಗು ಕೃಷಿಯಲ್ಲಿ ಈ ಸೂತ್ರ ಅನುಸರಿಸಿದರೆ ಬಂಪರ್ ಆದಾಯ
ಅಧಿಕ ಆದಾಯ ಗಳಿಸುವ ಕುರಿತ ಮಾಹಿತಿ ಇಲ್ಲಿದೆ...
ತೆಂಗು ಕೃಷಿಯಲ್ಲಿ ಅಧಿಕ ಆದಾಯ ಗಳಿಸುವ ಬಗೆ, ಬೀಜಗಳ ಆಯ್ಕೆ, ಸಸಿ ಮಾಡುವ ವಿಧಾನ, ಅಂತರ ಬೆಳೆ ಆಯೋಜನೆ, ತೆಂಗಿನ ಕೃಷಿಯಲ್ಲಿ ನೀರು, ಗೊಬ್ಬರ, ಬೆಳಕಿನ ನಿರ್ವಹಣೆ, ಇಳುವರಿ ಗುಟ್ಟು, ಮಾರುಕಟ್ಟೆ ತಂತ್ರ ಕುರಿತ ಮಾಹಿತಿ ಇಲ್ಲಿದೆ…
ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗು ಏಕದಳ ಸಸ್ಯಗಳ ಗುಂಪಿಗೆ ಸೇರಿದ ಪ್ರಮುಖವಾದ ತೋಟಗಾರಿಕೆ ಬೆಳೆಯಾಗಿದ್ದು, ತೆಂಗಿನ ಮರದ ಪ್ರತಿಯೊಂದು ಭಾಗವು ಪ್ರಯೋಜನಕರಿಯಾಗಿದೆ. ತೆಂಗಿನ ಕೃಷಿಗೆ ನೀರಾವರಿ ಸೌಕರ್ಯ ಇರಬೇಕು. ಜೊತೆಗೆ ಹೆಚ್ಚು ಬಿಸಿಲು ಬೀಳುವ ಪ್ರದೇಶ ಉತ್ತಮ.
ತೆಂಗಿನ ಮರದ ನೆತ್ತಿ ಸುಡಬೇಕು, ಮರದ ಬುಡ ತಂಪಾಗಿರುವ೦ತೆ (ತೇವಾಂಶ) ನೋಡಿಕೊಳ್ಳಲು ನೀರಿನ ವ್ಯವಸ್ಥೆ ಇರುವ ಮತ್ತು ನೀರು ನಿಲ್ಲದಂತೆ ಭೂಮಿಯಲ್ಲಿ ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನಲ್ಲಿ ಬೆಳೆಯಬಹುದು. ತೆಂಗು ಕೃಷಿಗೆ ಅಧಿಕ ತೇವ ಹಿಡಿದಿಡುವ ಕಪ್ಪು ಮಣ್ಣು ಸೂಕ್ತವಲ್ಲ.
ತೆಂಗು ಬೀಜದ ಆಯ್ಕೆ
ಬಿತ್ತನೆ ತೆಂಗಿನಕಾಯಿ ಆಯ್ಕೆ ಮಾಡಿಕೊಳ್ಳುವಾಗ, ಉತ್ತಮ ತಾಯಿ ಮರಗಳಿಂದ ಡಿಸೆಂಬರ್ನಿ೦ದ ಫೆಬ್ರವರಿವರಗೆ ಸಿಗುವ ಕಾಯಿಗಳಿಂದ ತೆಗೆದುಕೊಳ್ಳಬೇಕು. ಛತ್ರಿ ಆಕಾರದ ಮರದಲ್ಲಿ 35 ಹಸಿ ಗರಿಗಳು ಇರಬೇಕು, ಮರದ ವಯಸ್ಸು 25 ರಿಂದ 60 ವರ್ಷದೊಳಗಿರಬೇಕು. ಸುಲಿದ ಪ್ರತಿ ಬಲಿತ ಕಾಯಿ ಸುಮಾರು 500 ಗ್ರಾಂ ಮತ್ತು ಕೊಬ್ಬರಿ 150 ಗ್ರಾಂ ಹೆಚ್ಚು ತೂಗುವ, ಪ್ರತಿವರ್ಷ 70ಕ್ಕೂ ಹೆಚ್ಚು ಕಾಯಿ ಕೊಡುವ ಮರದಿಂದ ಬಿತ್ತನೆ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: Dwarf Arecanut Specialty : ಕುಬ್ಜ ತಳಿ ಅಡಿಕೆ ಕೃಷಿ
ಸಸಿ ಮಾಡುವ ವಿಧಾನ
ಮರದಿಂದ ಬಿದ್ದ ಅಥವಾ ತೆಗೆದ ಬಲಿತ ಕಾಯಿಗಳನ್ನು 3 ರಿಂದ 4 ವಾರಗಳ ಕಾಲ ಚೆನ್ನಾಗಿ ಗಾಳಿಯಾಡುವ ನೆರಳಿರುವ ಜಾಗದಲ್ಲಿ ಇಟ್ಟು ಸಸಿ ಮಡಿಯಲ್ಲಿ ತೆಂಗಿನ ಕಾಯಿಗಳನ್ನು ಮರದಿಂದ ಭೂಮಿಗೆ ಬಿದ್ದ ರೀತಿಯಲ್ಲಿ ಅಡ್ಡಲಾಗಿ ಮಲಗಿಸಿ ಪ್ರತಿ ಬೀಜದಿಂದ ಬೀಜಕ್ಕೆ 01 ಅಡಿ ಅಂತರ ಮತ್ತು ಸಾಲಿನಿಂದ ಸಾಲಿಗೆ 1.5 ಅಡಿ ಅಂತರ ಕೊಟ್ಟು ಭೂಮಿಯಲ್ಲಿ ಹಾಕಿ ಅದರ ಮೇಲೆ ಮೂರು ಇಂಚು ಮಣ್ಣು ಮುಚ್ಚಬೇಕು.
ಸಸಿ ಮಡಿಯ ಮೇಲೆ ತೆಂಗಿನ ಗರಿ ಅಥವಾ ಇನ್ನಿತರೇ ತ್ಯಾಜ್ಯಗಳಿಂದ ಮುಚ್ಚಿಗೆ ಮಾಡಿ ತೇವಾಂಶ ಕಾಪಾಡಬೇಕು. ಬೀಜ ಮೊಳಕೆ ಹೊಡೆಯಲು 3 ರಿಂದ 6 ತಿಂಗಳ ಸಮಯವಕಾಶ ತೆಗೆದುಕೊಳ್ಳುತ್ತದೆ. 6 ತಿಂಗಳ ಒಳಗೆ ಮೊಳಕೆ ಬಾರದ ಬೀಜವನ್ನು ತೆಗೆದು ಹಾಕಬೇಕು. ಇದನ್ನು ಸಸಿ ಮಾಡಿ ಹಾಕಬಾರದು. ಮೊಳಕೆ ಬಂದ 9 ರಿಂದ 12 ತಿಂಗಳ ನಂತರ ಸಸಿಯನ್ನು ನಾಟಿ ಮಾಡಬಹುದು.
ಇದನ್ನೂ ಓದಿ: Nati koli Poultry Farming – ನಾಟಿ ಕೋಳಿ ಸಾಕಣೆಯಲ್ಲಿ ಅಧಿಕ ಲಾಭ ಗಳಿಕೆಯ ಸೂತ್ರಗಳು
ತೆಂಗು ನೆಡುವ ಅಂತರ
ಚೌಕಾಕಾರ : 30 ಅಡಿ ಮತ್ತು ಮೇಲ್ಪಟ್ಟು (30’X30’,33’X33’,36’X36) ಬೇಲಿಯ ಪಕ್ಕದಲ್ಲಿ ಅಥವಾ ಇನ್ನಿತರೇ ಕಡೆ ಒಂಟಿ ಸಾಲು ತೆಂಗು ಹಾಕುವುದಾದರೆ 20 ಅಡಿ ಗಿಡದಿಂದ ಗಿಡಕ್ಕೆ ಅಂತರ ಕೊಟ್ಟು ಹಾಕಬಹುದು. ಎರಡು ಸಾಲುಗಳಂತೆ ನೆಡುವಾಗ ಜೋಡಿ ಸಾಲಿನಲ್ಲಿ ಗಿಡದಿಂದ ಗಿಡಕ್ಕೆ 18 ಅಡಿ ಜಿಗ್ಜಗ್ ಮತ್ತು ಎರಡು ಜೋಡಿ ಸಾಲಿನ ನಡುವೆ 30 ಅಡಿ ಅಂತರ ಕೊಡಬೇಕು.
ತೆಂಗಿನ ಜೊತೆಗೆ ತರಕಾರಿ, ಹೂವು, ಧಾನ್ಯ, ಬೇಳೆಕಾಳು, ಕಬ್ಬು ಇನ್ನಿತರೇ ಬೆಳೆ ಮಾಡಲು ಬಯಸುವವರು ತೆಂಗಿನ ಸಾಲುಗಳ ನಡುವೆ ಕನಿಷ್ಠ 40 ಅಡಿ ಅಥವಾ ಹೆಚ್ಚು ಅಂತರ ಕೊಡಬೇಕು. ತೆಂಗನ್ನು ವರ್ಷದ ಎಲ್ಲಾ ಕಾಲದಲ್ಲಿ ಹಾಕಬಹುದಾದರೂ ನಾಟಿ ಮಾಡಲು ಜೂನ್-ಜುಲೈ ತಿಂಗಳು ಸೂಕ್ತ. ಹೆಚ್ಚು ಮಳೆಯಾಗುವ ಪ್ರದೇಶದವರು ಮುಂಗಾರು ಮುಗಿದ ನಂತರ ನಾಟಿ ಮಾಡಬಹುದು.ಗಿಡ ನೆಡಲು 1 ಅಡಿ ಆಳ, 1 ಅಡಿ ಅಗಲದ ಗುಂಡಿ ಸಾಕು.
ಇದನ್ನೂ ಓದಿ: ಬ್ಯಾಂಕ್ ಮತ್ತು ಫೈನಾನ್ಸ್’ಗಳಿಂದ ಪಡೆದ ಸಾಲ ಕಟ್ಟದಿದ್ದರೆ ಏನಾಗುತ್ತದೆ?
ತೆಂಗಿನ ತೋಟದಲ್ಲಿ ಅಂತರ್ ಬೆಳೆಗಳು
ತೆಂಗಿನ ತೋಟದಲ್ಲಿ ಮರಗಳು ಬೆಳೆದು ನೆರಳು ಆವರಿಸುವವರಗೆ ಅಂದರೆ ಸುಮಾರು 7 ವರ್ಷದ ವರಗೆ ಕಡ್ಲೆಕಾಯಿ, ಸೂರ್ಯಕಾಂತಿ, ರಾಗಿ, ಹೂವಿನ ಬೆಳೆಗಳು, ತರಕಾರಿಗಳು, ಮೆಣಸಿನಕಾಯಿ, ಮರೆಗೆಣಸು, ಸಿಹಿ ಗೆಣಸು, ಅರಿಶಿಣ, ಶುಂಠಿ, ಬಾಳೆ, ಪರಂಗಿ, ನಿಂಬೆ, ಅಲಸಂದೆ, ಉದ್ದು, ಹೆಸರು ಇತ್ಯಾದಿ (ಕಬ್ಬು ಮತ್ತು ಭತ್ತ ಬೇಡ). ಆನಂತರ 7 ರಿಂದ 15 ವರ್ಷದ ವರಗೆ ಹೆಚ್ಚು ನೆರಳು ಅವರಿಸುವುದರಿಂದ ಗಾಳಿ, ಬೆಳಕು ನೋಡಿಕೊಂಡು ಬೆಳೆ ಮಾಡುವುದು.
15 ರಿಂದ 20 ವರ್ಷ ಕಳೆದ ನಂತರ ಕೊಕೊ, ಕಾಫಿ, ಜಾಯಿಕಾಯಿ, ಏಲಕ್ಕಿ, ಚಕ್ಕೆ, ವೆನಿಲಾ, ಸುವರ್ಣಗೆಡ್ಡೆ, ಕೆಸುವಿನಗೆಡ್ಡೆ, ಮರೆಗೆಣಸು, ಅರಿಶಿನ, ಪೈನ್ ಆಪಲ್, ಬಾಳೆ, ನೆಲ್ಲಿಕಾಯಿ, ಕರಿಬೇವು, ಬಟರ್ ಫ್ರೂಟ್, ವೀಳ್ಯದೆಲೆ, ಪೆಪ್ಪರ್, ನಿಂಬೆ, ಮೂಸಂಬಿ, ಕಿತ್ತಳೆ ಹಾಕಬಹುದು. ಅದಕ್ಕೆ ಗಾಳಿ ಮತ್ತು ಬಿಸಿಲು ಬಿದ್ದರೆ ಸಾಕು.
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
ತೆಂಗಿನ ನಿರ್ವಹಣೆ ಮತ್ತು ಇಳುವರಿ
ತೆಂಗಿನ ಮರಕ್ಕೆ ಮಳೆ ಇಲ್ಲದ ಸಮಯದಲ್ಲಿ ಪ್ರತಿದಿನ ಪ್ರತಿ ತೆಂಗಿನ ಮರಕ್ಕೆ 40 ರಿಂದ 50 ಲೀಟರ್ ನೀರನ್ನು ಹನಿ ನೀರಾವರಿ ಮೂಲಕ ನೀಡಬೇಕು.ತೆಂಗಿನ ಬುಡದ ಸುತ್ತಲೂ ಬಿದ್ದ ಗರಿಗಳನ್ನು ಮತ್ತು ತೆಂಗಿನ ಸಿಪ್ಪೆಯನ್ನು ಮುಚ್ಚಿಗೆ ಮಾಡುವುದರಿಂದ ನೀರು ಬೇರಿಗೆ ದೊರೆತು ಭೂಮಿಯಿಂದ ನೀರು ಅವಿಯಾಗಿ ಹೋಗುವುದನ್ನು ತಡೆಯುತ್ತದೆ.
ತೆಂಗಿನ ಮರಗಳ ಕೆಳಗೆ ಉಳುಮೆ ಮಾಡುವುದರಿಂದ ಬೇರು ಕತ್ತರಿಸಿ ಹೋಗುತ್ತದೆ. ಮರಗಳು ಸಂಗ್ರಹಿಸಿಟ್ಟುಕೊ೦ಡಿರುವ ಆಹಾರ, ಬೇರುಗಳ ಬೆಳವಣೆಗೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವುದರಿಂದ ಮರಗಳ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ.
ತೆಂಗಿನ ಮರ ಸುಮಾರು 7 ವರ್ಷದಿಂದ ಇಳುವರಿ ಕೊಡಲು ಶುರುವಾದರೂ, ನಿರೀಕ್ಷಿತ ಮತ್ತು ಸ್ಥಿರವಾದ ಇಳುವರಿ ಬರಲು 15 ವರ್ಷ ಬೇಕಾಗುತ್ತದೆ. ಅಂದಾಜು ಇಳುವರಿ ಒಂದು ಮರದಿಂದ ಸುಮಾರು 80 ರಿಂದ 150 ಸಂಖ್ಯೆಯ ತೆಂಗಿನಕಾಯಿ ನಿರೀಕ್ಷೆ ಮಾಡಬಹುದು. ಬಲಿತ ತೆಂಗಿನಕಾಯಿ ಕೊಬ್ಬರಿಯಾಗಲು 9 ರಿಂದ 12 ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ಒಂದು ಉತ್ತಮ ದರ್ಜೆ ತೆಂಗಿನಕಾಯಿ೦ದ 150 ರಿಂದ 200 ಗ್ರಾಂ ಕೊಬ್ಬರಿ ಪಡೆಯಬಹುದು.
-ಪ್ರಶಾಂತ್ ಜಯರಾಮ್, ಪ್ರಗತಿಪರ ಕೃಷಿಕರು, 9342434530