
ಕರ್ನಾಟಕದಲ್ಲಿ ಅಡಿಕೆ ಕೃಷಿ (Arecanut Cultivation) ಕ್ರೇಜು ದಿನೆ ದಿನೇ ಉಲ್ಭಣವಾಗುತ್ತಿದೆ. ಕರಾವಳಿ ಮತ್ತು ಮಲೆನಾಡಿಗೆ ಸೀಮಿತವಾಗಿದ್ದ ಅಡಿಕೆ ಕೃಷಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕವನ್ನು ವ್ಯಾಪಿಸಿಕೊಂಡಿದ್ದು; ದಟ್ಟ ಬಿಸಿಲು ಪ್ರದೇಶಗಳಲ್ಲೂ ಅಡಿಕೆ ಬೆಳೆಯುವ ಸಾಹಸ ನಡೆಯುತ್ತಿದೆ.
ಕೃಷಿಕರ ಆಸಕ್ತಿಗೆ ಅನುಗುಣವಾಗಿ ವಿವಿಧ ಅಡಿಕೆ ತಳಿಗಳ ಸಂಶೋಧನೆ ಕೂಡ ನಡೆಯುತ್ತಿದ್ದು; ಕಡಿಮೆ ಅವಧಿಯಲ್ಲಿ ಫಸಲು ನೀಡಿವ ಹಾಗೂ ಹೆಚ್ಚು ಇಳುವರಿ ಕೊಡುವ ವಿವಿಧ ಸುಧಾರಿತ ಅಡಿಕೆ ತಳಿಗಳು (Improved high yielding varieties arecanut) ಪ್ರಚಲಿತಕ್ಕೆ ಬರುತ್ತಿವೆ. ಈ ಪೈಕಿ ಕುಬ್ಜ ಅಡಿಕೆ ತಳಿ ಕೃಷಿಕರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ.
ಇದನ್ನೂ ಓದಿ: RRB Recruitment 2025 : ಹುಬ್ಬಳ್ಳಿ ರೈಲ್ವೇ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿಟ್ಲದ ಸಿಪಿಸಿಆರ್‌ಐ ಅಡಿಕೆ ತಳಿಗಳು
1956ರಲ್ಲಿ ಆರಂಭಗೊAಡ ವಿಟ್ಲದ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ (Central Plantation Crops Research Institute- CPCRI) ವಿಶೇಷ ಅಡಿಕೆ ತಳಿಗಳ ಸಂಶೋಧನೆ ನಡೆಯುತ್ತಿದ್ದು; ಈಗಾಗಲೇ ಈ ಕೆಳಕಂಡ ಹನ್ನೊಂದು ತಳಿಗಳನ್ನು ಬಿಡುಗಡೆ ಮಾಡಲಾಗಿದೆ:
- ಮಂಗಳ
- ಸುಮಂಗಳ
- ಶ್ರೀಮಂಗಳ
- ಮೋಹಿತ್ ನಗರ
- ಸ್ವರ್ಣ ಮಂಗಳ
- ಕಹಿಕುಚಿ
- ಮಧುರ ಮಂಗಳ
- ನಲಬಾರಿ
- ವಿಟಿಎಲ್ ಎಎಚ್-1
- ವಿಟಿಎಲ್ ಎಎಚ್-2
- ಶತಮಂಗಳ
ಇದನ್ನೂ ಓದಿ: Line 883 Onion : ಎಕರೆಗೆ 325 ಕ್ವಿಂಟಾಲ್ ಇಳುವರಿ ಕೊಡುವ ಹೊಸ ತಳಿ ಇರುಳ್ಳಿ
ಅಧಿಕ ಇಳುವರಿಯ ಶತಮಂಗಳ
ಈ ಹನ್ನೊಂದು ಅಡಿಕೆ ತಳಿಗಳ ಪೈಕಿ 2016ರಲ್ಲಿ ಬಿಡುಗಡೆಯಾದ ‘ಶತಮಂಗಳ’ (Shatamangala) ತಳಿಗೆ ಹೆಚ್ಚಿನ ಬೇಡಿಕೆಯಿದೆ. ಇದು ಮಧ್ಯಮ ಎತ್ತರದ ತಳಿಯಾಗಿದ್ದು, ಎರಡರಿಂದ ಎರಡೂವರೆ ವರ್ಷಕ್ಕೆ ಹಿಂಗಾರ ಬಿಡುತ್ತದೆ. ಕರಾವಳಿಯ ಚಾಲಿ ಅಡಕೆ ಹಾಗೂ ಮಲೆನಾಡಿನ ಕೆಂಪಡಕೆ ವರ್ಗಕ್ಕೂ ಈ ತಳಿ ಹೊಂದಿಕೊಳ್ಳುತ್ತದೆ. ಜೊತೆಗೆ ಇಳುವರಿಯೂ ಅಧಿಕ ಎನ್ನುತ್ತಾರೆ ವಿಜ್ಞಾನಿಗಳು.
ಒಂದಡಿ ಎತ್ತರದ ಅಡಿಕೆ ತಳಿ
ಇನ್ನು, ವಿಟಿಎಲ್‌ಎಎಚ್-1 (VTLAH-1 Arecanut variety) ಹಾಗೂ ವಿಟಿಎಲ್‌ಎಎಚ್-2 (VTLAH-2 Arecanut variety) ಎಂಬ ಹೆಸರಿನ ಎರಡು ಕುಬ್ಜ ತಳಿಯ ಅಡಕೆ ಗಿಡಗಳನ್ನು 2006-07ರಲ್ಲಿ ಬಿಡುಗಡೆ ಮಾಡಲಾಗಿದೆ. ಭೂ ಮಟ್ಟದಿಂದ ಕೇವಲ ಒಂದಡಿ ಎತ್ತರಕ್ಕೆ ಬೆಳೆದಲ್ಲಿಂದಲೇ ಫಸಲು ನೀಡುವ ಈ ಹೈಬ್ರಿಡ್ ತಳಿಯ ಗಿಡಗಳು 15 ವರ್ಷಗಳಷ್ಟು ವಯಸ್ಸಾದರೂ ನಿಂತುಕೊAಡೇ ಗೊನೆ ಕೊಯ್ಯಬಹುದಾದಷ್ಟು ಗಿಡ್ಡ ಮರಗಳಾಗಿವೆ.
ಸಣ್ಣ ಗಿಡವಾದ್ದರಿಂದ ಇದರ ನಿರ್ವಹಣೆ, ಔಷಧ ಸಿಂಪರಣೆ, ಕೊಯ್ಲು ಅತ್ಯಂತ ಸುಲಭ. ಆದರೆ ಎತ್ತರ ತಳಿಯ ಮರಗಳಿಗಿಂತ ಕಡಿಮೆ ಇಳುವರಿ ಕೊಡುತ್ತದೆ ಎನ್ನುವುದು ಮಾತ್ರ ಇದರ ಮಿತಿ. ಎತ್ತರದ ಮರವೊಂದು ವರ್ಷಕ್ಕೆ 4 ಕೆಜಿ ವರೆಗೆ ಅಡಕೆ ನೀಡಿದರೆ, ಇದು ಎರಡೂವರೆ ಕೆಜಿ ನೀಡುತ್ತದೆ ಅಷ್ಟೇ.
ಇದನ್ನೂ ಓದಿ: ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು
ಹೈಬ್ರಿಡ್ ಕುಬ್ಜ ತಳಿ
ತಾಯಿ ಮರ ಹಾಗೂ ತಂದೆ ಮರಗಳ ಸಂಕರದಿ೦ದ ಹೊಸ ಮಾದರಿಯ ಹೈಬ್ರಿಡ್ ಮಾಡಿ ಕುಬ್ಜ ತಳಿಯ ಸಸ್ಯವನ್ನು ಉತ್ಪಾದಿಸಲಾಗಿದೆ. ಆದರೆ ಈ ಹೊಸ ತಳಿಯ ಗಿಡದಿಂದ ಮತ್ತೆ ಸಂಕರ ಮಾಡಲು ಸಾಧ್ಯವಿಲ್ಲ. ಹೊಸ ಸಸಿ ಬೇಕಿದ್ದರೆ ಮತ್ತೆ ಮೂಲಕ್ಕೆ ಹೋಗಿ ಪ್ರತಿ ವರ್ಷ ತಾಯಿ ಮರ-ತಂದೆ ಮರಗಳ ಸಂಕರ ಕ್ರಿಯೆ ಕೈಗೊಳ್ಳಬೇಕಾಗುತ್ತದೆ.
ಇದು ಶ್ರಮದಾಯಕ ಮತ್ತು ಇದಕ್ಕೆ ಹೆಚ್ಚಿನ ಕಾರ್ಮಿಕರ ಅಗತ್ಯವಿದೆ. ಈ ಕಾರಣದಿಂದಾಗಿಯೇ ಸಿಪಿಸಿಆರ್‌ಐನಲ್ಲಿ ವರ್ಷಕ್ಕೆ ಗರಿಷ್ಠ ಮೂರು ಸಾವಿರ ಕುಬ್ಜ ತಳಿ ಗಿಡಗಳನ್ನು ಮಾತ್ರ ಉತ್ಪಾದಿಸಲಾಗುತ್ತಿದೆ. ಇದರ ಬೇಡಿಕೆಗೆ ಹೋಲಿಸಿದರೆ ಇದು ತೀರಾ ಸಣ್ಣ ಪ್ರಮಾಣದ ಉತ್ಪಾದನೆಯಾಗಿದೆ.
ವಿಟ್ಲದ ವಿವಿಧ ಅಡಿಕೆ ತಳಿಗಳ ಕುರಿತ ಮಾಹಿತಿಗಾಗಿ ಇಲ್ಲಿ ಒತ್ತಿ…