ಕಣ್ಮರೆಯಾಗುತ್ತಿದೆ ಶುದ್ಧ ನಾಟಿಕೋಳಿ ತಳಿ | ಕರ್ನಾಟಕದ ನಾಟಿಕೋಳಿ ಸ್ಥಿತಿ ಏನಾಗುತ್ತಿದೆ? Karnatakas purebred Nati Koli
ನಾಟಿಕೋಳಿ ಸಾಕಾಣಿಕೆ ಪುರಾತನ ಕಾಲದಿಂದಲೂ ಮನೆಮನೆಗಳಲ್ಲೂ ರೂಢಿಯಲ್ಲಿತ್ತು. ಕ್ರಮೇಣ ಇದು ಕಡಿಮೆಯಾಗುತ್ತ ಬರುತ್ತಿದೆ. ನಗರಗಳಲ್ಲಿ ದುರ್ಬಿನ್ ಹಾಕಿ ಹುಡುಕಿದರೂ ನಾಟಿಕೋಳಿ ಸಾಕಾಣಿಕೆ ಸಿಗುವುದು ಅಪರೂಪ. ಇನ್ನು ಕೆಲವು ವರ್ಷಗಳಲ್ಲಿ ಹಳ್ಳಿಗಳಲ್ಲೂ ಈ ಸ್ಥಿತಿ ಬರಬಹುದು. ಮುಂದಿನ ಪೀಳಿಗೆಗೆ ನಾಟಿಕೋಳಿಯನ್ನು ಫೋಟೋಗಳಲ್ಲಿ ನೋಡುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.
ಏಕೆಂದರೆ ನಾಟಿಕೋಳಿ ತಳಿಯನ್ನು ಕ್ರಾಸ್ ಮಾಡಿಸಿ ನಾನಾ ಬಗೆಯ ತಳಿಯನ್ನು ಅಭಿವೃದ್ಧಿಪಡಿಸಿ ದೇಶದ ಮೂಲೆ ಮೂಲೆಗೂ ಕ್ರಾಸ್ ತಳಿಗಳು ಪೂರೈಕೆ ಆಗುತ್ತಿರುವುದರಿಂದ ಶುದ್ಧ ನಾಟಿಕೋಳಿಗಳನ್ನು ಹುಡುಕುವ ಪರಿಸ್ಥಿತಿಗೆ ನಿರ್ಮಾಣವಾಗುತ್ತಿದೆ. ನಮ್ಮ ನಾಟಿಕೋಳಿ ತಳಿಯನ್ನು ನಾವು ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೇಶೀಯ ನಾಟಿಕೋಳಿಗಳನ್ನು ಹೆಚ್ಚು ಹಣ ಕೊಟ್ಟು ತರುವ ಪಾಡು ನಿರ್ಮಾಣವಾಗಬಹುದು.
ವಿದೇಶಿ ಜರ್ಸಿ, ಎಚ್ಎಫ್ ಮಿಶ್ರ ತಳಿ ಹಸುಗಳ ಅಬ್ಬರದಲ್ಲಿ ನಮ್ಮ ನಾಟಿ ತಳಿಗಳಾದ ಹಳ್ಳಿಕಾರ್, ಖಿಲಾರಿ, ದೇವಣಿ, ಮಲೆನಾಡಗಿಡ್ಡ, ಅಮೃತಮಹಲ್ ಆಕಳು ತಳಿಗಳಂತೆ ನಾಟಿಕೋಳಿ ಸ್ಥಿತಿಯೂ ಆಗಬಹುದು. ಇಂದು ಕೋಳಿಯ ಗಾತ್ರ ಮತ್ತು ಮೊಟ್ಟೆಯ ಇಳುವರಿಗಾಗಿ ವಿವಿಧ ತಳಿ ಅಭಿವೃದ್ಧಿಗೊಳಿಸಲಾಗುತ್ತಿದೆ.
ಗಿರಿರಾಜ, ಸ್ವರ್ಣಧಾರ, ವನರಾಜ, ಗ್ರಾಮಪ್ರಿಯ, ಕೈರಾಳಿ, ಕಾವೇರಿ, ಡಿಪಿ, ಡಿಪಿ ಕ್ರಾಸ್ ಇನ್ನೂ ಅನೇಕ ತಳಿಯನ್ನು ಅಭಿವೃದ್ಧಿಗೊಳಿಸಿರುವುದನ್ನು ನಾವು ಕಾಣಬಹುದು. ಈ ಎಲ್ಲ ಕೋಳಿಗಳು ನೋಡಲು ನಾಟಿ ಕೋಳಿ ಬಣ್ಣಕ್ಕೆ ಹೋಲುತ್ತವೆಯಾದರೂ ಇವು ನಾಟಿಕೋಳಿ ಅಲ್ಲ. ಬಣ್ಣ ಹೋಲಿಕೆ ಹೊರತಾಗಿ ಇವು ನಾಟಿಕೋಳಿಯ ಗುಣವನ್ನು ಕಳೆದುಕೊಂಡಿರುತ್ತವೆ. ಕ್ರಮೇಣ ಇನ್ನೂ ಕೆಲವು ಗುಣಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ.
ಗಮನಾರ್ಹವೆಂದರೆ ಕೆಲವು ಭಾಗಗಳಲ್ಲಿ ನಾಟಿಕೋಳಿ ತಳಿಗಳೇ ಸಿಗುತ್ತಿಲ್ಲ. ಅಂಗಡಿಗಳಲ್ಲಿ ದೊರೆಯುವ ದಪ್ಪ ಗಾತ್ರದ ಬಣ್ಣ ಬಣ್ಣದ ಕೋಳಿಗಳನ್ನೇ ಅನೇಕರು ನಾಟಿಕೋಳಿ ಎಂದು ತಿಳಿದುಕೊಂಡಿದ್ದಾರೆ. ಇಂತಹ ತಳಿಗಳನ್ನು ಹೆಚ್ಚಾಗಿ ಹೊರ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟçಗಳಲ್ಲಿ ಬೆಳೆದು ನಮ್ಮ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ.
ನಮ್ಮ ಹಳ್ಳಿಗಾಡುಗಳಲ್ಲಿ ಬೆಳೆದ ಸಣ್ಣ ಗಾತ್ರದ ಕೋಳಿಗಳಿಗೆ ಮಾರುಕಟ್ಟೆ ಇಲ್ಲದಂತಾಗುತ್ತಿದೆ. ಕರ್ನಾಟಕದಲ್ಲಿ ಬೆಳೆದ ಕೋಳಿಗಳ ಮಾರುಕಟ್ಟೆಯನ್ನು ಹದಗೆಡಿಸಿರುವುದರಿಂದ ನಮ್ಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ರಾಜ್ಯದಿಂದ ಅಭಿವೃದ್ಧಿಗೊಳಿಸಿದ ಕೋಳಿ ಮರಿ ತಂದು ಬೀದಿ ಬದಿಯಲ್ಲಿ ಮಾರಾಟ ಮಾಡಿ ಹೋಗುತ್ತಿದ್ದಾರೆ. ವರ್ಷಕ್ಕೆ ನಾಲ್ಕರಿಂದ ಐದು ಬಾರಿ ಅಗ್ಗದ ದರಕ್ಕೆ ಮಾರಾಟ ಮಾಡುತ್ತಾರೆ.
ನಮ್ಮ ರಾಜ್ಯದಲ್ಲಿ ಹಿತ್ತಲು ಸಾಕಾಣಿಕೆ ಮಾಡುವ ರೈತರು ಹೆಚ್ಚು ಮೊಟ್ಟೆ ಮತ್ತು ಮಾಂಸ ಉತ್ಪಾದನೆ ಆಗುತ್ತದೆ ಎಂದು ಬೇರೆ ರಾಜ್ಯದವರು ಬೀದಿ ಬದಿಯಲ್ಲಿ ಮಾರಾಟ ಮಾಡುವ ಮರಿಯನ್ನು ಪಡೆದು ಬೆಳೆಸುತ್ತಿದ್ದಾರೆ. ಮಾತ್ರವಲ್ಲ ಅವುಗಳಿಂದಲೇ ತಮ್ಮಲ್ಲಿರುವ ನಾಟಿಕೋಳಿಗೆ ಕ್ರಾಸ್ ಮಾಡಿಸಿ ಶುದ್ಧ ನಾಟಿ ತಳಿಯನ್ನು ಮಿಶ್ರ ತಳಿಯನ್ನಾಗಿ ಮಾಡಿಕೊಂಡಿದ್ದಾರೆ.
ಕೆಲವರು ರಸ್ತೆಯ ಬದಿಯಲ್ಲಿ ಮಾರಾಟ ಮಾಡುವ ಕೋಳಿ ಮರಿಯನ್ನು ತಂದು ತಮ್ಮಲ್ಲಿರುವ ಕೋಳಿಗಳನ್ನು ರೋಗಕ್ಕೆ ತುತ್ತಾಗಿಸಿಕೊಳ್ಳುವುದುಂಟು. ಬಳಿಕ ರೋಗ ನಿಯಂತ್ರಣ ಮಾಡುವ ಉಪಾಯ ಅರಿಯದೇ ಶುದ್ಧ ತಳಿಗಳನ್ನು ಕೊಲ್ಲುವಂತಹ ಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ಇದರಿಂದ ನಮ್ಮ ರಾಜ್ಯದ ಕೋಳಿ ಸಂತತಿ ದಿನೇ ದಿನೆ ಕ್ಷೀಣಿಸುತ್ತಿದೆ!
ಈ ರೀತಿಯಾಗಿ ನಮ್ಮ ರಾಜ್ಯದ ನಾಟಿ ಕೋಳಿ ತಳಿಯ ಗುಣಮಟ್ಟ, ಲಕ್ಷಣ, ಗಾತ್ರ ಕಲಸುಮೇಲೋಗರ ಆಗುತ್ತಿದೆ. ಮುಂದಿನ ದಿನದಲ್ಲಿ ನಮ್ಮ ಶುದ್ಧ ನಾಟಿಕೋಳಿಗಳನ್ನು ಕಳೆದುಕೊಂಡು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದರಿಂದ ನಮ್ಮಲ್ಲಿ ಇರುವ ತಳಿಯನ್ನು ಉಳಿಸಿಕೊಳ್ಳುವ ಜರೂರತ್ತಿದೆ.
ನಾವು ರೈತರು ಮನೆಯ ಉಪಯೋಗಕ್ಕಾಗಿ ಎರಡರಿಂದ ಹತ್ತು ಕೋಳಿಯನ್ನು ಹಿತ್ತಲು ಅಥವಾ ಜಮೀನಿನ ವಿದ್ಯುತ್ ಮೋಟಾರು ಇಡುವ ಮನೆಗಳಲ್ಲಿ ಸಣ್ಣದಾಗಿ ನಿರ್ಮಾಣ ಮಾಡಿಕೊಂಡರೆ ನಮ್ಮ ದೇಶೀಯ ನಾಟಿಕೋಳಿ ತಳಿಯನ್ನು ಉಳಿಸುವುದರ ಜೊತೆಗೆ ಉತ್ತಮ ಮಾಂಸ ಮತ್ತು ಮೊಟ್ಟೆಯ ಸೇವನೆ ಮಾಡಿಕೊಂಡು ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
| ಸಂಜಯ್ ಕುಮಾರ್ ಡಿ, ಶಿವಮೊಗ್ಗ
One Comment