ಸುದ್ದಿಗಳುಹವಾಮಾನ

Monsoon 2024: ಈ ಬಾರಿ ಭರ್ಜರಿ ಮುಂಗಾರು ಮಳೆ | 45 ದಿನ ಮೊದಲೇ ‘ಮಳೆ ಮೂಡು’ ಬಿಚ್ಚಿಟ್ಟ ಹವಾಮಾನ ಇಲಾಖೆ

WhatsApp Group Join Now
Telegram Group Join Now

Monsoon 2024 : ಮಳೆ ಕೊರತೆಯಿಂದ ದೇಶದ 14ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬರಗಾಲ ಘೋಷಣೆಯಾಗಿದೆ. ಕರ್ನಾಟಕದಲ್ಲಂತೂ ಹಲವು ತಿಂಗಳುಗಳ ಹಿಂದೆಯೇ ಬರೋಬ್ಬರಿ 223 ತಾಲ್ಲೂಕುಗಳು ‘ಬರಪೀಡಿತ’ ಎಂದು ಸರಕಾರದಿಂದ ಘೋಷಿಸಲ್ಪಟ್ಟಿವೆ. ಮಾರ್ಚ್’ನಿಂದಲ೦ತೂ ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ಇದೀಗ ಭಾರತೀಯ ಹವಾಮಾನ ಇಲಾಖೆಯು ಖುಷಿಯ ಸುದ್ದಿ ನೀಡಿದೆ.

ಹೌದು, ಮುಂಗಾರು ಪ್ರವೇಶಕ್ಕೂ 45 ದಿನಗಳ ಮೊದಲೇ ಹವಾಮಾನ ಇಲಾಖೆಯು (Meteorological Department) ಪ್ರಸಕ್ತ 2024ನೇ ಸಾಲಿನಲ್ಲಿ ದೇಶಾದ್ಯಂತ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ಸುರಿಯಲಿದೆ ಎಂದು ತಿಳಿಸಿದೆ. ಈ ಬಾರಿ ಮುಂಗಾರು ಮಳೆಯು (Monsoon 2024) ವಾಡಿಕೆಗಿಂತ ಹೆಚ್ಚಿರಲಿದೆ ಎಂಬ ಈ ವರದಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ಶೇ.106ರಷ್ಟು ಮಳೆ

ಎಲ್ ನಿನೋ ಪರಿಣಾಮದ ತೀವ್ರತೆಯು ಕಡಿಮೆಯಾಗಿರುವ ಕಾರಣ ಜೂನ್‌ನಿಂದಲೇ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಯಥಾಪ್ರಕಾರ ಜೂನ್ 1ರಂದು ಕೇರಳದ ಮೂಲಕ ಪ್ರವೇಶಿಸುವ ಮುಂಗಾರು ಮಾರುತಗಳು ಕೆಲವೇ ದಿನಗಳಲ್ಲಿ ದೇಶಾದ್ಯಂತ ವ್ಯಾಪಿಸಲಿದೆ. ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶಾದ್ಯಂತ ಶೇ.106ರಷ್ಟು ಮಳೆಯಾಗಲಿದೆ. ಇದು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸುದೀರ್ಘ ಅವಧಿಯ ಸರಾಸರಿ (Long Period Average) ಆಧಾರದ ಮೇಲೆ ಹವಾಮಾನ ಇಲಾಖೆಯು ಮಳೆಯ ಪ್ರಮಾಣವನ್ನು ಅಂದಾಜಿಸುತ್ತದೆ. ಎಲ್‌ಪಿಎ ಪ್ರಕಾರ ಶೇ.105-110ರಷ್ಟು ಮಳೆಯಾದರೆ, ಅದನ್ನು ವಾಡಿಕೆಗಿಂತ ಹೆಚ್ಚಿನ ಮಳೆ ಎಂದು ಪರಿಗಣಿಸಲಾಗುತ್ತದೆ. ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಗಸ್ಟ್’ನಿಂದಲೇ ಮಳೆ ಮೂಡು

ಆಗಸ್ಟ್-ಸೆಪ್ಟಂಬರ್ ಅವಧಿಯಲ್ಲಿಯೇ ಉತ್ತಮ ಮಳೆಗೆ ಕಾರಣವಾಗುವ ‘ಲಾ ನಿನಾ’ ಸ್ಥಿತಿಯು ಪ್ರಾರಂಭವಾಗುತ್ತದೆ. 1951ರಿಂದ 2023ರ ವರೆಗಿನ ದತ್ತಾಂಶಗಳನ್ನು ನೋಡಿದರೆ ‘ಎಲ್ ನಿನೋ’ ಬಳಿಕ ‘ಲಾ ನಿನಾ’ ಸ್ಥಿತಿ ಬಂದಾಗ ಅಂದರೆ ಸುಮಾರು 9 ಬಾರಿ ಭಾರತದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ ಎಂದು ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ ಮೊಹಾ ಪಾತ್ರ ಹೇಳಿದ್ದಾರೆ.

ದೇಶಾದ್ಯಂತ ಈಶಾನ್ಯ, ವಾಯವ್ಯ ಮತ್ತು ಪೂರ್ವದ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಈ ಬಾರಿ ಜೂನ್‌ನಿಂದ ಸೆಪ್ಟಂಬರ್ ವರೆಗಿನ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಅಂದರೆ ದೀರ್ಘಾವಧಿ ಸರಾಸರಿ (87 ಸೆ.ಮೀ.) ಶೇ.106ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now

Related Posts

error: Content is protected !!