Pouti Khata : ಮನೆ ಬಾಗಿಲಲ್ಲೇ ಪೌತಿ ಖಾತೆ
ಪೌತಿ ಖಾತೆ ಯೋಜನೆಯಡಿ ಪಿತ್ರಾರ್ಜಿತ ಆಸ್ತಿ ವಾರಸುದಾರರ ಹೆಸರಿನಲ್ಲಿ ನೋಂದಣಿ

ಕಂದಾಯ ಇಲಾಖೆ (Revenue Department) ಮತ್ತೊಂದು ‘ಪೌತಿ ಖಾತೆ ಅಭಿಯಾನ’ (Pouti Khata Campaign) ಹಮ್ಮಿಕೊಳ್ಳುತ್ತಿದೆ. ಈ ಹಿಂದೆ ಇದೇ ಅಭಿಯಾನವನ್ನು ರಾಜ್ಯದಲ್ಲಿ ನಡೆಸಲಾಗಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿಲ್ಲ. ಇದೀಗ ರೈತರ ಮನೆ ಬಾಗಿಲಿಗೇ ಹೋಗಿ ಪೌತಿ ಖಾತೆ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಕಂದಾಯ ಇಲಾಖೆ ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ರಾಜ್ಯದಲ್ಲಿ ಬಹಳಷ್ಟು ಜಮೀನಿನ ದಖಲೆಗಳು ಮೃತ ಹಿರಿಯ ಹೆಸರಿನಲ್ಲಿಯೇ ಇವೆ. ಇಂತಹ ಜಮೀನಿನ ದಾಖಲೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡುವ ಹಿನ್ನಲೆಯಲ್ಲಿ ಮನೆ ಬಾಗಿಲಿಗೆ ಪೌತಿ ಖಾತೆ ತಲುಪಿಸುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: Micro Finance Ordinance 2025 : ಅಕ್ರಮವಾಗಿ ನೀಡಿದ ಸಾಲ ಮತ್ತು ಬಡ್ಡಿ ಸಂಪೂರ್ಣ ಮನ್ನಾ
ಏನಿದು ಪೌತಿ ಖಾತೆ?
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯು ಮರಣಾನಂತರವೂ ಆತನ ಹೆಸರಿಲ್ಲಿಯೇ ಉಳಿದಿದ್ದು; ಅದನ್ನು ವಾರಸುದಾರರಿಗೆ ಅಥವಾ ಕುಟುಂಬಸ್ಥರ ಹೆಸರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ‘ಪೌತಿ ಖಾತೆ’ ಎಂದು ಕರೆಯಲಾಗುತ್ತದೆ.
ಪೌತಿ ಖಾತೆ ಆಗದೇ ಇದ್ದರೆ ಜಮೀನು ಇದ್ದರೂ, ಅದನ್ನು ಉತ್ತಿ ಬಿತ್ತಿ ಫಸಲು ತೆಗೆಯಬಹುದೇ ಹೊರತು ಅದರಿಂದ ಸರ್ಕಾರದ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳುವುದರಿಂದ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ.
ಪೌತಿ ಖಾತೆ ಯೋಜನೆಯಡಿ ಜಮೀನು ವರ್ಗಾವಣೆಯಾದರೆ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬ್ಯಾಂಕ್ಗಳಿ೦ದ ಸಾಲ ಸೌಲಭ್ಯ ಸೇರಿದಂತೆ ಅನೇಕ ಪ್ರಯೋಜನಗಳು ಸಿಗಲಿದ್ದು; ಆಸ್ತಿಯನ್ನು ಪೌತಿ ಖಾತೆಯಡಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್
ಮರಣ ಪ್ರಮಾಣ ಪತ್ರದ ಕಗ್ಗಂಟು
ರಾಜ್ಯದಲ್ಲಿ ಮೃತರ ದಾಖಲೆಗಳು ಇಲ್ಲದ ಕಾರಣಕ್ಕೋ ಅಥವಾ ದಾಯಾದಿಗಳ ಆಸ್ತಿ ಕಲಹದ ಕಾರಣಕ್ಕೋ ಇನ್ನು ಬಹಳಷ್ಟು ವಾರಸುದಾರರು ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಂಡಿಲ್ಲ. ಮೃತ ಆಸ್ತಿ ಮಾಲೀಕರ ಮರಣ ಪ್ರಮಾಣ ಪತ್ರದ ಕಾರಣಕ್ಕೆ ಜಮೀನಿನ ಖಾತೆ ವರ್ಗಾವಣೆ ಆಗುತ್ತಿಲ್ಲ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವ್ಯಕ್ತಿ ನಿಧನರಾದ 28 ದಿನದೊಳಗೆ ಸಂಬAಧಪಟ್ಟ ಗ್ರಾಮ ಲೆಕ್ಕಿಗರು ಮರಣ ಪ್ರಮಾಣ ಪತ್ರ ನೀಡಬೇಕು. ಒಂದು ವರ್ಷದೊಳಗಿದ್ದರೆ ತಹಶೀಲ್ದಾರರು, ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಿದ್ದರೆ ಜೆಎಂಎಫ್ ನ್ಯಾಯಾಲಯದ ಮೂಲಕವೇ ದಾವೆ ಹೂಡಿ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಮನೆ ಬಾಗಿಲಿಗೇ ಪೌತಿ ಖಾತೆ ಅಭಿಯಾನ
ಇದೀಗ ಪೌತಿ ಖಾತೆಯಾಗದೇ ಉಳಿದ ಆಸ್ತಿಗಳನ್ನು ಸಂಬ೦ಧಿಸಿದ ರೈತರ ಹೆಸರಿಗೆ ವರ್ಗಾವಣೆ ಮಾಡಿಕೊಡುವ ‘ಪೌತಿ ಖಾತೆ ಅಭಿಯಾನ’ವನ್ನು ಕಂದಾಯ ಇಲಾಖೆ ಮತ್ತೆ ಆರಂಭಿಸುತ್ತಿದೆ. ರೈತರ ಮನೆ ಬಾಗಿಲಿಗೇ ಹೋಗಿ ಪೌತಿ ಖಾತೆ ಅಭಿಯಾನ ನಡೆಸಿದರೆ ಅರ್ಹರಿಗೆ ಜಮೀನಿನ ವಾರಸುದಾರಿಕೆಯ ಪಹಣಿ ಸಿಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಕೆಲಸದ ಒತ್ತಡಗಳು ಕಡಿಮೆ ಇವೆಯೋ ಅಂತಹ ಜಿಲ್ಲೆಗಳಲ್ಲಿ ‘ಪೌತಿ ಖಾತೆ ಅಭಿಯಾನ’ವನ್ನು ಮೊದಲು ಕೈಗೆತ್ತಿಕೊಳ್ಳಲಾಗುತ್ತದೆ. ನಂತರ ಬೇರೆ ಬೇರೆ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲು ಇಲಾಖೆ ಯೋಜನೆ ಹಾಕಿಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
ಹೇಗೆ ನಡೆಯಲಿದೆ ಪೌತಿ ಖಾತೆ ಅಭಿಯಾನ?
ಪೌತಿ ಖಾತೆಗಾಗಿ ಈಗಾಗಲೇ ಪ್ರತ್ಯೇಕ ಸಾಫ್ಟ್ ವೇರ್ ಸಿದ್ಧಪಡಿಸಲಾಗಿದೆ. ಗ್ರಾಮ ಲೆಕ್ಕಿಗರು ಮನೆ ಮನೆಗೆ ಹೋಗಿ, ವಾರಸುದಾರರ ನಿಖರ ಮಾಹಿತಿ ಪಡೆಯುತ್ತಾರೆ. ಇದಕ್ಕೆ ವಂಶವೃಕ್ಷವನ್ನು ಆಧಾರವಾಗಿ ಬಳಸಲಾಗುತ್ತದೆ. ಆಧಾರ್ ಮೂಲಕವೇ ಒಟಿಪಿ ಪಡೆದು ದಾಖಲು ಮಾಡಲಾಗುತ್ತದೆ.
ಒಬ್ಬರಿಗಿಂತ ಹೆಚ್ಚು ವಾರಸುದಾರರು ಇದ್ದಲ್ಲಿ ಒಬ್ಬರ ಬಳಿಕ ಒಬ್ಬರ ಹೆಸರು ದಾಖಲು ಮಾಡಿಕೊಂಡು ಒಟಿಪಿ ಪಡೆದು ಖಾತೆ ನೀಡಿಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ದಾಯಾದಿ ಆಸ್ತಿ ಕಲಹ, ಮೃತ ಮಾಲೀಕರ ದಾಖಲೆ ಇಲ್ಲದಿದ್ದರೆ ಪರ್ಯಾಯವಾಗಿ ಸ್ಥಳ ಮಹಜರು ನಡೆಸಿ, ದಾಖಲೆ ಸೃಷ್ಟಿಸಲಾಗುತ್ತದೆ. ಪೌತಿ ಖಾತೆ ಒಪ್ಪದಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು ಎಂದು ಕಂದಾಯ ಸಚಿವರು ವಿವರಿಸಿದರು.
ಇದನ್ನೂ ಓದಿ: Union Budget 2025 : ಕೇಂದ್ರ ಬಜೆಟ್ನಲ್ಲಿ ರೈತರಿಗೆ ಬಂಪರ್ ಕೊಡುಗೆ