Senior Citizens Welfare Act- ತಂದೆ ತಾಯಿ ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಹಕ್ಕಿಲ್ಲ | ಕಾಯ್ದೆಗೆ ರಾಜ್ಯ ಸರ್ಕಾರದ ಬಲ
ಪೋಷಕ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007

ಹಿರಿಯ ನಾಗರಿಕರನ್ನು ಕಡೆಗಣಿಸುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಿರಿಯರಿಗೆ ಬಲ ನೀಡುವ ಪ್ರಯತ್ನಕ್ಕೆ ಮುಂದಾಗಿದೆ…
ಹಿರಿಯರನ್ನು ನೋಡಿಕೊಳ್ಳುವುದು ಅವರ ಮಕ್ಕಳ ಆದ್ಯ ಕರ್ತವ್ಯ. ಆದರೆ, ಇಂದು ಹೊಂದಾಣಿಕೆಯ ಸಮಸ್ಯೆಯಿಂದ ವೃದ್ಧಾಶ್ರಮಗಳು ಕಿಕ್ಕಿರಿಯುತ್ತಿವೆ. ವೃದ್ಧರು ಬೇಡ ಅವರ ಆಸ್ತಿ-ಸಂಪತ್ತು ಬೇಕು ಎಂಬ ನೀಚ ಪ್ರವೃತ್ತಿ ಸಮಾಜದಲ್ಲಿ ಹೆಚ್ಚುತ್ತಿದೆ. ಇದಕ್ಕಾಗಿಯೇ ಕಾನೂನು ರೂಪಿಸುವಂತ ದುಃಸ್ಥಿತಿ ಎದುರಾಗಿದೆ.
ಹೌದು, ಕೇಂದ್ರ ಸರ್ಕಾರ ಈಗಾಗಲೇ ಹಿರಿಯರ ರಕ್ಷಣೆಗೆ ಕಾನೂನು ರಚಿಸಿದೆ. ಸುಪ್ರೀಂ ಕೋರ್ಟ್ ಕೂಡ ಹಿರಿಯರ ಆಸ್ತಿ ವರ್ಗಾವಣೆ ಮಾಡಿಕೊಂಡ ಮೇಲೆ ಅವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದರೆ ಹಿಂದಕ್ಕೆ ಪಡೆಯುವ ಹಕ್ಕು ಹಿರಿಯರಿಗೆ ಇದೆ ಎಂದು ಹೇಳಿದೆ. ಇದನ್ನೇ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೂಡ ‘ಹಿರಿಯರ ಪಾಲನೆ ಸರಿಯಾಗಿಲ್ಲ ಎಂದರೆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ’ ಎಂದು ಹೇಳುವ ಮೂಲಕ ಮೇಲ್ಮನೆಯಲ್ಲಿ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: Bagar Hukum-ಬಗರ್‌ಹುಕುಂ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ವಿನಾಯಿತಿ
ಏನಿದು ಹಿರಿಯರ ರಕ್ಷಣೆ ಕಾನೂನು?
ತಂದೆ, ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ, ತನ್ನ ಮಕ್ಕಳಿಗೆ ಅಥವಾ ಸಂಬ೦ಧಿಕರಿಗೆ ಅವರು ನೀಡಿದ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರದ ‘ಪೋಷಕ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007’ (Maintenance and Welfare of Parents and Senior Citizens Act, 2007) ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯೆ ಬಲ್ಲೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ಕೇಂದ್ರ ಸರ್ಕಾರದ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನೇ ಆರೈಕೆ ಮಾಡದಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದು ವೇಳೆ ಮಕ್ಕಳು ಅಥವಾ ಸಂಬ೦ಧಿಕರು ತಮ್ಮನ್ನು ಆರೈಕೆ ಮಾಡದಿದ್ದರೆ ಅವರ ಹೆಸರಿಗೆ ಮಾಡಿರುವ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡುವ ಅಧಿಕಾರ ಹಿರಿಯ ನಾಗರಿಕರಿಗೆ ಇದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Sashakt Panchayat Netri Abhiyan- ಗ್ರಾಮ ಪಂಚಾಯತಿಗಳಲ್ಲಿ ಇನ್ನು ಗಂಡಂದಿರ ದರ್ಬಾರ್ ಬಂದ್
ಮಕ್ಕಳಿಗೆ ಆಸ್ತಿ ಹಕ್ಕು ಸಿಗದು…
ಕೇಂದ್ರ ಸರ್ಕಾರ 2007ರಲ್ಲೇ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ಯನ್ನು ಜಾರಿಗೆ ತಂದಿದೆ. ಆದರೆ, ಈ ಬಗ್ಗೆ ಹಲವರಿಗೆ ಮಾಹಿತಿಯೇ ಇಲ್ಲ. ಈ ಮಾಹಿತಿಯನ್ನು ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪಿಸಬೇಕು ಎಂಬ ಉದ್ದೇಶದಿಂದಲೇ ಪರಿಷತ್’ನಲ್ಲಿ ಈ ಕಾಯ್ದೆಯ ಬಗ್ಗೆ ಉಲ್ಲೇಖಿಸುತ್ತಿದ್ದೇನೆ.
ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬ೦ಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯ ನಾಗರಿಕರು ಸೆಕ್ಸನ್ 09ರ ಅಡಿಯಲ್ಲಿ ಸಂಬ೦ಧಪಟ್ಟ ಅಧಿಕಾರಿಗಳ ಬಳಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಹಿರಿಯ ನಾಗರಿಕರ ದೂರು ಸಾಬೀತಾದರೆ, ತಂದೆ ತಾಯಿಯಿಂದ ಆಸ್ತಿ ಪಡೆದು ಅವರ ಆರೈಕೆ ಮಾಡದಿದ್ದರೆ ಸೆಕ್ಷನ್ 23ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬ೦ಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೆ ಮರುಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದರು.