Bagar Hukum-ಬಗರ್‌ಹುಕುಂ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ವಿನಾಯಿತಿ
ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದ ಸ್ಪಷ್ಟನೆ...

ಬಗರ್ ಹುಕುಂ (Bagar Hukum) ಅಕ್ರಮ ಸಕ್ರಮದ ಕುರಿತು ನಿನ್ನೆ ಮಾರ್ಚ್ 10ರಂದು ವಿಧಾನಸಭೆಯಲ್ಲಿ ತುಂಬ ಗಂಭೀರವಾದ ಚರ್ಚೆ ನಡೆದಿದೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿರುವ ರೈತರನ್ನು ಒಕ್ಕಲೆಬ್ಬಿಸುವ ಕುರಿತು ಕಂದಾಯ ಸಚಿವರು ಸ್ಪಷ್ಟ ಮಾಹಿತಿ ನೀಡಿದ್ದಾರೆ…
ಸರ್ಕಾರಿ ಜಮೀನುಗಳಲ್ಲಿ ಕೃಷಿ ಮಾಡಿಕೊಂಡಿರುವ ರೈತರನ್ನು ಬಗರ್ ಹುಕುಂ ಅಕ್ರಮ ಸಕ್ರಮ ಅರ್ಜಿಗಳು ಸಂಪೂರ್ಣ ವಿಲೇವಾರಿ ಆಗುವವರೆಗೂ ಅಲ್ಲಿಂದ ಒಕ್ಕಲೆಬ್ಬಿಸುವುದಿಲ್ಲ. ಸದರಿ ಜಮೀನಿನಲ್ಲಿರುವ ಬೆಳೆ ಕಟಾವಿಗೂ ಅಡ್ಡಿಪಡಿಸುವಂತಿಲ್ಲ. ಅಂತಹ ಘಟನೆಗಳೇನಾದರೂ ನಡೆದರೆ ಕೂಡಲೇ ನನ್ನ ಗಮನಕ್ಕೆ ತರಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Sashakt Panchayat Netri Abhiyan- ಗ್ರಾಮ ಪಂಚಾಯತಿಗಳಲ್ಲಿ ಇನ್ನು ಗಂಡಂದಿರ ದರ್ಬಾರ್ ಬಂದ್
ಸಲ್ಲಿಕೆಯಾದ ಅರ್ಜಿಗಳೆಷ್ಟು?
ಬಗರ್ ಹುಕುಂ ಸರಕಾರಿ ಜಮೀನು ಹಕ್ಕುದಾರಿಕೆ ನೀಡುವ ಸಲುವಾಗಿಯೇ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಅನ್ವಯ ನಮೂನೆ 50, ನಮೂನೆ 53 ಹಾಗೂ ನಮೂನೆ 57ರಲ್ಲಿ ಅರ್ಜಿ ಈಗಾಗಲೇ ರಾಜ್ಯಾದ್ಯಂತ ಸ್ವೀಕರಿಸಲಾಗಿದೆ. 1991ರಿಂದ ಶುರುವಾದ ಅರ್ಜಿ ಸ್ವೀಕಾರ ನಮೂನೆ 57ರ ಅಡಿಯಲ್ಲಿ ಅರ್ಜಿ ಸ್ವೀಕರಿಸುವ ಅವಧಿ ಕಳೆದ 2023ರ ಏಪ್ರಿಲ್‌ಗೆ ಅಂತ್ಯವಾಗಿದೆ.
ರಾಜ್ಯದಲ್ಲಿ ಈ ಎಲ್ಲ ನಮೂನೆಗಳಲ್ಲಿ ಬಗರ್ ಹುಕುಂ ಜಮೀನು ಸಕ್ರಮೀಕರಣ ಕೋರಿ ಒಟ್ಟು 9,56,512 ಅರ್ಜಿ ಸಲ್ಲಿಕೆಯಾಗಿವೆ. ಬರೋಬ್ಬರಿ 54 ಲಕ್ಷ ಎಕರೆ ಭೂಮಿ ಮಂಜೂರಾತಿಗೆ ಕೋರಿಕೆ ಸಲ್ಲಿಕೆಯಾಗಿವೆ. ಹೀಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಇದೀಗ ಡಿಜಿಟಲ್ ಹಕ್ಕುಪತ್ರ ಸಿಗಲಿದೆ. ಆದರೆ, ಎಲ್ಲಾ ಅರ್ಜಿಗಳು ವಿಲೇವಾರಿ ಆಗುವವರೆಗೂ ಅನರ್ಹ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Free horticulture training-ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ರಾಜ್ಯದಲ್ಲಿ ಒಟ್ಟು ಬಗರ್‌ಹುಕುಂ ಸಮಿತಿಗಳೆಷ್ಟು?
ಮಾರ್ಚ್ 10ರಂದು ವಿಧಾನಸಭೆಯಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ, ಕೆ.ಎಸ್.ಆನಂದ, ರವಿಕುಮಾರ ಗೌಡ, ಭೀಮಣ್ಣ ಟಿ.ನಾಯ್ಕ ಮತ್ತಿತರ ಸದಸ್ಯರು ತಮ್ಮ ತಮ್ಮ ಕ್ಷೇತ್ರದ ಈ ಸಮಸ್ಯೆಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸುದೀರ್ಘ ಉತ್ತರ ನೀಡಿದ ಕಂದಾಯ ಸಚಿವರು, ರಾಜ್ಯದಲ್ಲಿ ಒಟ್ಟು 185 ಬಗರ್‌ಹುಕುಂ ಸಮಿತಿಗಳು ರಚನೆಯಾಗಿದ್ದು; ಇನ್ನೂ 13 ವಿಧಾನಸಭಾ ಕ್ಷೇತ್ರಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ ಬಾಕಿ ಇವೆ.
ಬಗರ್ ಹುಕುಂ ಸಮಿತಿಗಳ ರಚನೆ ಉಳಿದು ಹೋಗಲು ಹಲವು ಕಾರಣಗಳಿವೆ. ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ಎಲ್ಲಾ ಸಮಿತಿಗಳನ್ನು ರಚಿಸಲಾಗುವುದು. ಬಗರ್ ಹುಕುಂ ಸಮಿತಿಯಿಂದ ಅರ್ಜಿಗಳ ಇತ್ಯರ್ಥವಾಗುವ ವರೆಗೆ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ. ಹಾಗೆಯೇ ಬಗರ್ ಹುಕುಂ ಸಮಿತಿ ಪರಿಗಣಿಸಿ ವಿಲೇವಾರಿಯಾಗಿರುವ ಅರ್ಜಿಗಳನ್ನು ಹೊಸದಾಗಿ ಪರಿಗಣಿಸುವುದಿಲ್ಲ ಎಂದೂ ಕಂದಾಯ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ
ಬೀಳು, ಫಡಾ ಜಮೀನು ರೈತರಿಗೆ ನೀಡಲು ಸಾಧ್ಯವಿಲ್ಲ!
ಕಂದಾಯ ಬಾಕಿಯಿಂದಾಗಿ ಸರ್ಕಾರಿ ಬೀಳು ಅಥವಾ ಫಡಾ ಎಂದು ದಾಖಲಾದ ಜಮೀನುಗಳನ್ನು ಮರಳಿ ಸಾಗುವಳಿ ಜಮೀನು ಎಂಬುದಾಗಿ ಆರ್‌ಟಿಸಿಗಳಲ್ಲಿ ದಾಖಲಿಸಿ ರೈತರಿಗೆ ವಹಿಸಲು ಸಧ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಈ ರೀತಿಯ ಜಮೀನುಗಳನ್ನು ಸಾಗುವಳಿಗೆ ಅರ್ಹವೆಂದು ಪರಿಗಣಿಸಿ ಮೂಲ ಮಾಲೀಕರಿಗೆ ವಹಿಸುವುದಕ್ಕೆ 2012ರಿಂದ 2014ನೇ ಇಸವಿಯ ವರೆಗೆ ಅವಕಾಶ ನೀಡಲಾಗಿತ್ತು. ಈಗ ಮತ್ತೊಮ್ಮೆ ಇಂತಹ ಅವಕಾಶ ನೀಡಲ್ಲ. ನೀಡಿದರೆ ಅನೇಕ ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದು 50-60 ವರ್ಷಗಳ ಸಮಸ್ಯೆ. ಸರ್ಕಾರಿ ಬೀಳು ಎಂದು ದಾಖಲಾದ ಅನೇಕ ಜಮೀನುಗಳಲ್ಲಿ ಶಾಲೆ, ಸ್ಮಶಾನ ಸೇರಿದಂತೆ ಸರ್ಕಾರದ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಒಂದೊಮ್ಮೆ ಮತ್ತೆ ಅವಕಾಶ ಕಲ್ಪಿಸಿದರೆ, ಮೂಲ ಮಾಲೀಕರು ಎಂದು ಪ್ರತಿಪಾದನೆ (ಕ್ಲೇಮ್) ಮಾಡುವವರಿಂದ ವಿವರಿಸಲಾಗದ ಜಟಿಲ ಮತ್ತು ಸಂಕೀರ್ಣ ಸಮಸ್ಯೆಗಳು ಉದ್ಭವವಾಗಲಿದೆ ಎಂಬುದು ಸಚಿವರ ಸ್ಪಷ್ಟನೆ ನೀಡಿದ್ದಾರೆ.