Govt SchemesNews

ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ Village Map information

ಗ್ರಾಮಠಾಣೆ ನಕ್ಷೆ (Village Map) ಎಂದರೇನು? ಗ್ರಾಮಠಾಣಾ ನಕ್ಷೆಯಲ್ಲಿ ಏನೇನಿರುತ್ತದೆ? ಇದರ ಬಗ್ಗೆ ಯಾಕೆ ಎಲ್ಲರೂ ತಿಳಿದುಕೊಳ್ಳಬೇಕು? ಗ್ರಾಮಠಾಣಾ ನಕ್ಷೆ ಪಡೆಯುವುದು ಹೇಗೆ? ಗ್ರಾಮಠಾಣಾ ವ್ಯಾಪ್ತಿ ಮೀರಿ ಬೆಳೆದ ಆಸ್ತಿಗಳ ಸಮಸ್ಯೆ ಏನು? ಗ್ರಾಮಠಾಣಾ ಗಡಿ ವಿಸ್ತರಣೆ ಇರುವ ತೊಡಕುಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಪ್ರತಿ ಗ್ರಾಮಕ್ಕೂ ಅದರದೇ ಆದ ಚರಿತ್ರೆ ಇರುತ್ತದೆ. ಅಂತೆಯೇ ಪ್ರತಿ ಗ್ರಾಮಗಳಿಗೂ ಅದರದೇ ಆದ ನಕ್ಷೆ ಕೂಡ ಇರುತ್ತದೆ. ಅದನ್ನೇ ಗ್ರಾಮಠಾಣಾ ನಕ್ಷೆ ಎಂದು ಕರೆಯಲಾಗುತ್ತದೆ. ಗ್ರಾಮ ಚರಿತ್ರೆ ಬಾಯಿಂದ ಬಾಯಿಗೆ ಕಾಲಕ್ಕನುಗುಣವಾಗಿ ಬದಲಾಗುತ್ತ ಹೋಗಬಹುದು; ಆದರೆ ಗ್ರಾಮಠಾಣಾ ನಕ್ಷೆ ಸಾಮಾನ್ಯವಾಗಿ ಮೂಲದಿಂದಲೂ ಹಾಗೆಯೇ ಇರುತ್ತದೆ. ಮುಖ್ಯವಾಗಿ ಇದೊಂದು ಅಧಿಕೃತ ದಾಖಲೆಯಾಗಿರುತ್ತದೆ.

ಆ ಊರಿನ ರಸ್ತೆ, ಸಾರ್ವಜನಿಕ ಸ್ವತ್ತು, ಪ್ರತಿ ಮನೆಯ ವಿಸ್ತೀರ್ಣ ಇತ್ಯಾದಿ ಮಾಹಿತಿಗಳನ್ನೊಳಗೊಂಡ ಸದರಿ ಗ್ರಾಮಠಾಣಾ ನಕ್ಷೆ ಒಂದು ರೀತಿಯಲ್ಲಿ ಆ ಹಳ್ಳಿಯ ವಿಸ್ತಾರ ವೈಶಿಷ್ಟ್ಯತೆಯನ್ನು ವಿವರಿಸುವ ನಕಾಶೆಯಾಗಿದೆ. ಆ ಗ್ರಾಮದ ಪ್ರತಿಯೊಬ್ಬರಿಗೂ ಇದರ ಬಗ್ಗೆ ಮಾಹಿತಿ ತಿಳಿದಿದ್ದರೆ ತಮ್ಮೂರಿನ ಆಳ ಅಗಲವನ್ನು ಅರಿತಂತೆ. ಮಾತ್ರವಲ್ಲ ಗ್ರಾಮದ ಯಾವುದೇ ಸಾರ್ವಜನಿಕ ಸ್ವತ್ತು ಅಕ್ರಮವಾಗದಂತೆ ತಡೆಯಬಹುದು.

ಏನಿದು ಗ್ರಾಮಠಾಣಾ ನಕ್ಷೆ?

ಕಂದಾಯ ದಾಖಲೆಗಳಲ್ಲಿ ಇಲ್ಲದ, ಯಾವುದೇ ರೀತಿಯ ಕಂದಾಯ ಸಂದಾಯವಾಗದ ಸಂಪೂರ್ಣ ವಸತಿ ಪ್ರದೇಶವನ್ನು ಗ್ರಾಮಠಾಣಾ ನಕ್ಷೆ ವ್ಯಾಪ್ತಿ ಪ್ರದೇಶ ಎಂದು ಕರೆಯಬಹುದು. ಗ್ರಾಮ ಸರ್ವೆ ಸಮಯದಲ್ಲಿ ಜನ ವಸತಿ ಪ್ರದೇಶವನ್ನು ಪ್ರತ್ಯೇಕವಾಗಿ ಅಳತೆ ಮಾಡಿ ಗಡಿ ಗುರುತಿಸಿ ರಚಿಸುವ ನಕ್ಷೆಗೆ ಗ್ರಾಮಠಾಣಾ ನಕ್ಷೆ ಎನ್ನಲಾಗುತ್ತದೆ. ಗ್ರಾಮ ಪಂಚಾಯತಿಗೆ ಸಂಬ೦ಧಿಸಿದ ಈ ಪ್ರದೇಶಕ್ಕೆ ಯಾವುದೇ ಸರ್ವೆ ನಂಬರ್ ಇರುವುದಿಲ್ಲ.

ಸಮಸ್ಯೆ ಎಂದರೆ ಬ್ರಿಟೀಷರ ಕಾಲದಲ್ಲಿ ನಿಗದಿಯಾಗಿದ್ದ ಗ್ರಾಮಠಾಣಾ ಗಡಿ ಈತನಕ ಪರಿಷ್ಕರಣೆ ಕಂಡಿಲ್ಲವಾದ್ದರಿ೦ದ ಗ್ರಾಮಠಾಣಾ ನಕ್ಷೆ ಗಡಿ ಮೀರಿ ಎಲ್ಲೆಡೆ ಜನವಸತಿ ಪ್ರದೇಶಗಳು ವಿಸ್ತರಣೆಯಾಗಿವೆ. ಹೀಗಾಗಿ ಸದ್ಯ ಲಭ್ಯವಾಗುವ ಗ್ರಾಮಠಾಣಾ ನಕ್ಷೆಯು ಮೂಲ ಊರಿನ ವಿವರ ನೀಡುತ್ತದೆಯೇ ವಿನಃ ಗಡಿಮೀರಿ ಬೆಳೆದ ನಿಮ್ಮೂರಿನ ವಸತಿ ಪ್ರದೇಶದ ಮಾಹಿತಿ ಇದರಲ್ಲಿ ಲಭ್ಯವಾಗವುದಿಲ್ಲ.

ಗ್ರಾಮಠಾಣಾ ನಕ್ಷೆಯಲ್ಲಿ ಏನೇನಿರುತ್ತದೆ?

ಹೆಸರೇ ಹೇಳುವಂತೆ ಇದು ಆಯಾ ಗ್ರಾಮದ ನಿರ್ಧಿಷ್ಟ ವಿಸ್ತೀರ್ಣ ಮಾಹಿತಿಯುಳ್ಳ ಗಡಿರೇಖಾ ಚಿತ್ರ. ಇದರಲ್ಲಿ ಇಡೀ ಗ್ರಾಮದ ಪ್ರತಿ ಕಟ್ಟಡ, ಹಿತ್ತಲು, ಕಣಕಟ್ಟೆ, ಸಾರ್ವಜನಿಕ ಆಸ್ತಿ, ರಸ್ತೆ, ಸೇತುವೆ, ಸಾರ್ವಜನಿಕ ಸೇದುಬಾವಿ ಸೇರಿದಂತೆ ಇತ್ಯಾದಿ ಮಾಹಿತಿ ಇದರಲ್ಲಿರುತ್ತದೆ.

ಯಾರಾದರೂ ಊರಿನ ಪ್ರಭಾವಿಗಳು ಸಾರ್ವಜನಿಕ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದರೆ ಗ್ರಾಮಠಾಣಾ ನಕ್ಷೆಯ ಮೂಲಕ ಅಂತಹ ಪ್ರದೇಶವನ್ನು ಸುಲಭವಾಗಿ ಗುರುತಿಸಬಹುದು. ಗ್ರಾಮಠಾಣಾ ನಕ್ಷೆ ಆಧಾರದ ಮೇಲೆಯೇ ಮನೆ ಕಟ್ಟಡ ಪರವಾನಗಿ ನೀಡಲಾಗುತ್ತದೆ.

ಗ್ರಾಮಸ್ಥರು ತಮ್ಮ ತಮ್ಮ ಮನೆಗೆ ಸಂಬAಧಿಸಿದ ಪ್ರದೇಶ ಗುರುತಿಸಬಹುದು.ಜತೆಗೆ ಗ್ರಾಮದಿಂದ ತಮ್ಮ ತಮ್ಮ ಜಮೀನಿಗೆ ಹೋಗುವ ರಸ್ತೆಗಳು ಮತ್ತು ಹಳ್ಳಿಯಿಂದ ಪಟ್ಟಣ ಅಥವಾ ಬೇರೊಂದು ಹಳ್ಳಿ ಸಂಪರ್ಕಿಸುವ ರಸ್ತೆಗಳನ್ನು ಇದರಿಂದ ತಿಳಿಯಬಹುದು.

ಗ್ರಾಮಠಾಣಾ ನಕ್ಷೆ ಪಡೆಯುವುದು ಹೇಗೆ?

ಗ್ರಾಮ ಲೆಕ್ಕಾಧಿಕಾರಿಗಳಿಗೆ ಗ್ರಾಮಠಾಣಾ ನಕ್ಷೆ ಯಾವ ಕಾರಣಕ್ಕೆ ಬೇಕು ಎಂದು ಅರ್ಜಿ ಸಲ್ಲಿಸುವ ಮೂಲಕ ಗ್ರಾಮಠಾಣಾ ನಕ್ಷೆಯನ್ನು ಪಡೆಯಬಹುದು. ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಹಾಗೂ ಮನೆ ಕಂದಾಯ ರಶೀದಿ ಲಗತಿಸಿ ನಿಗಧಿತ ಶುಲ್ಕ ಪಾವತಿಸಿದರೆ, ಗ್ರಾಮ ಲೆಕ್ಕಾಧಕಾರಿಗಳು ಅರ್ಜಿ ಪರಿಶೀಲಿಸಿ ಗ್ರಾಮಠಾಣಾ ನಕ್ಷೆ ತಮ್ಮಲ್ಲಿ ಲಭ್ಯವಿದ್ದರೆ ನೀಡುತ್ತಾರೆ. ಲಭ್ಯವಿಲ್ಲದಿದ್ದರೆ ಸರ್ವೇ ಕಚೇರಿಯಿಂದ ಪಡೆದು ಒದಗಿಸುತ್ತಾರೆ.

ಗ್ರಾಮಠಾಣಾ ಹೊರಗಿರುವ ಆಸ್ತಿಗಳ ಸಮಸ್ಯೆ

ಈಗ ಲಭ್ಯವಿರುವ ಗ್ರಾಮಠಾಣಾ ನಕ್ಷೆ ಬ್ರಿಟಿಷರ ಕಾಲದಲ್ಲಿ ನಿಗದಿಯಾದ ಗಡಿನಕ್ಷೆಯಾಗಿದ್ದು; ಈತನ ಗ್ರಾಮಠಾಣಾ ಗಡಿ ಮತ್ತೆ ಪರಿಷ್ಕರಣೆಯೇ ಆಗಿಲ್ಲ. ಹೀಗಾಗಿ ಇದೀಗ ಗ್ರಾಮಠಾಣಾ ನಕ್ಷೆಯ ಗಡಿ ಮೀರಿ ಬೆಳೆದ ವಸತಿ ಪ್ರದೇಶಗಳ ವಾರಸುದಾರಿಕೆಗೆ ಸಂಬ೦ಧಿಸಿದ೦ತೆ ಸಾಕಷ್ಟು ಕಗ್ಗಂಟು ಉದ್ಭವಾಗಿದೆ.

ಬಹುಮುಖ್ಯವಾಗಿ ಗ್ರಾಮಠಾಣಾದಿಂದ ಹೊರಗಿರುವ ಆಸ್ತಿಗಳ ಮಾರಾಟಕ್ಕೆ ಹಲವು ಕಾನೂನು ತೊಡಕುಗಳು ಎದುರಾಗುತ್ತಿವೆ. ಗ್ರಾಮಠಾಣಾ ವ್ಯಾಪ್ತಿ ಹೊರಗಿನ ಕಂದಾಯ ಪ್ರದೇಶಗಳ ಆಸ್ತಿಗೆ ಸಂಬ೦ಧಿಸಿದ `9 ಮತ್ತು 11ಎ’ ಇ-ಸ್ವತ್ತು ಸಿಗುತ್ತಿಲ್ಲ. ಇದರಿಂದ ಅಂತಹ ಆಸ್ತಿಗಳ ಮಾಲೀಕರಿಗೆ ಹೊಸ ಮನೆ ನಿರ್ಮಾಣಕ್ಕೆ, ವಿಸ್ತರಣೆಗೆ, ದುರಸ್ತಿಗೆ ಬ್ಯಾಂಕ್‌ಗಳಿ೦ದ ಸಾಲ ಸೌಲಭ್ಯ ಸಿಗುತ್ತಿಲ್ಲ.

ಹತ್ತಾರು ವರ್ಷಗಳ ಹಿಂದೆ ಬಾಯಿ ಮಾತಿನ ನಂಬಿಕೆ ಮೇಲೆ ಮಾರಾಟವಾಗಿದ್ದ ಆಸ್ತಿಗಳು ಖಾತೆಯಾಗದ ಕಾರಣ ಖರೀದಿದಾರರು ಅನುಭವದಲ್ಲಿರುವ ಸೊತ್ತಿನ ಆರ್‌ಟಿಸಿ ಮತ್ತು ಇತರ ದಾಖಲೆಗಳು ಈಗಲೂ ಮೂಲ ಮಾಲೀಕರ ಹೆಸರಿನಲ್ಲಿವೆ. ಬಹುತೇಕ ಪ್ರಕರಣಗಳಲ್ಲಿ ಒಂದೇ ಸ್ವತ್ತಿನ ದಾಖಲೆಗಳು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಎರಡೂ ಕಡೆ ಇವೆ. ಇದರಿಂದ ಸಾಕಷ್ಟು ಭೂ ವ್ಯಾಜ್ಯಗಳು ಸೃಷ್ಟಿಯಾಗುತ್ತಿವೆ.

ಗ್ರಾಮಠಾಣಾ ವ್ಯಾಪ್ತಿ ವಿಸ್ತರಣೆ ಯಾಕಾಗುತ್ತಿಲ್ಲ?

ಈಗ್ಗೆ ಆರು ವರ್ಷಗಳ ಹಿಂದೆ, ಅಂದರೆ 2016ರಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ, ಕಂದಾಯ ಸಚಿವರ ಜಂಟಿ ಅಧ್ಯಕ್ಷತೆಯಲ್ಲಿ ಇ-ಸ್ವತ್ತು ಯೋಜನೆ ಅನುಷ್ಠಾನದ ಬಗ್ಗೆ ನಡೆದ ಸಭೆಯಲ್ಲಿ ಗ್ರಾಮ ಠಾಣಾ ವ್ಯಾಪ್ತಿಯ ವಿಸ್ತರಣೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಈ ಪ್ರಯತ್ನ ಈಗಲೂ ಸಫಲವಾಗಿಲ್ಲ.

ಅಧಿಕೃತ ವ್ಯಾಖ್ಯಾನದ ಪ್ರಕಾರ `ಗ್ರಾಮಠಾಣಾಧಿ’ ಎಂದರೆ ಭೂಮಾಪನ ಕಾರ್ಯಾಚರಣೆ ಕೈಗೊಂಡ ಸಮಯದಲ್ಲಿ ಉದ್ದೇಶ ಪೂರ್ವಕವಾಗಿಯೇ ಅಳತೆಯಿಂದ ಕೈಬಿಡಲಾದ ಪ್ರದೇಶವಾಗಿರುತ್ತದೆ. ಹೀಗಾಗಿ ಈಗಾಗಲೇ ಸರ್ವೇ ನಂಬರ್‌ಗಳನ್ನು ನೀಡಿ ಅಳತೆಯಾಗಿ ನಿಗದಿಪಡಿಸಿರುವ ಪ್ರದೇಶವನ್ನು ಭೂಕಂದಾಯ ನಿಯಮಾವಳಿಗಳು ಮತ್ತು ಭೂಮಾಪನ ಕಾರ್ಯ ವಿಧಾನಗಳಡಿ ‘ಗ್ರಾಮಠಾಣಾ’ ಎಂದು ಘೋಷಿಸಲಾಗದು ಎಂದು ಭೂಮಾಪನ ವ್ಯವಸ್ಥೆ ಮತ್ತು ದಾಖಲೆಗಳ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!