
ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರ ಗುಡುಗು-ಮಿಂಚು, ಆಲಿಕಲ್ಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ…
ಯುಗಾದಿ ವರ್ಷ ತೊಡಕಿನ ದಿನವೇ ರಾಜ್ಯದಲ್ಲಿ ಮಳೆ ಅಬ್ಬರ ಶುರುವಾಗಿದ್ದು; ರಾಜ್ಯದ ಹಲವೆಡೆ ಏಪ್ರಿಲ್ ಮೊದಲ ವಾರದಲ್ಲಿ ಗುಡುಗು-ಮಿಂಚು, ಆಲಿಕಲ್ಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ 31ರಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 3 ಸೆಂ. ಮೀ., ಧಾರವಾಡದಲ್ಲಿ 2 ಸೆಂ. ಮೀ., ಬಾಗಲಕೋಟೆ ಜಿಲ್ಲೆಯ ಹುನಗುಂದ ಮತ್ತು ಹುಬ್ಬಳ್ಳಿಯಲ್ಲಿ ತಲಾ 1 ಸೆಂ. ಮೀ. ಮಳೆಯಾಗಿದೆ. ಇದೇ ರೀತಿ ಮುಂದಿನ ದಿನಗಳ ಕಾಲ ಮಳೆ ಮುಂದುವರಿಯುವ ನಿರೀಕ್ಷೆ ಇದೆ.
ಇದನ್ನೂ ಓದಿ: Tatkal Podi- ಜಂಟಿ ಖಾತೆಯಿಂದ ಏಕ ಮಾಲೀಕತ್ವ ಪಹಣಿ ಪಡೆಯುವುದು ಹೇಗೆ?
ಏಪ್ರಿಲ್ 1ರಿಂದ 5 ದಿನ ಮಳೆ
ಏಪ್ರಿಲ್ 3 ರಿಂದ 5ರ ವರೆಗೆ ಕರಾವಳಿಯ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯ ಪ್ರಕಾರ ಏಪ್ರಿಲ್ ಮೊದಲ ವಾರ ಅಂದರೆ ಏಪ್ರಿಲ್ 1ರಿಂದ 6ರ ವರೆಗೆ ಈ ಕೆಳಕಂಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ:
ಏಪ್ರಿಲ್ 1-2: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಕಡೆ ಗುಡುಗು-ಮಿಂಚು ಹಾಗೂ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Property A Khata B Khata Guide- ಆಸ್ತಿಗಳ ‘ಎ’ ಖಾತಾ ಮತ್ತು ‘ಬಿ’ ಖಾತಾ ವಿವರ
ಏಪ್ರಿಲ್ 3: ಕರಾವಳಿಯ ಎಲ್ಲಾ ಜಿಲ್ಲೆಗಳು, ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಕೂಡ ಒಡೆದು ಸುರಿಯುವ ರೀತಿಯ ಮಳೆಯಾಗಬಹುದು. ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ನಿರೀಕ್ಷೆ ಇದೆ.
ಏಪ್ರಿಲ್ 4: ಕರಾವಳಿಯ ಎಲ್ಲಾ ಜಿಲ್ಲೆಗಳು, ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಾವಣಗೆರೆ, ಚಿತ್ರದುರ್ಗ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಉಳಿದ ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಏಪ್ರಿಲ್ 5-6: ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Surya Ghar Rooftop Scheme-10 ಲಕ್ಷ ಮನೆಗಳಿಗೆ ಸೋಲಾರ್ ಕರೆಂಟ್