
2025ನೇ ಸಾಲಿನ ಹವಾಮಾನ ಪರಿಸ್ಥಿತಿ ಕುರಿತು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಅಧಿಕಾರಿಗಳು 2025ನೇ ಸಾಲಿನ ಮಾನ್ಸೂನ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ…
ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗ್ರೀನ್ ಸಿಟಿ ಖ್ಯಾತಿಯ ರಾಜಧಾನಿ ಬೆಂಗಳೂರು ಅಪ್ಪಟ ಬಿಸಿಲೂರಾಗಿ ಮಾರ್ಪಟ್ಟಿದೆ. ಉತ್ತರ ಕರ್ನಾಟಕ ಬೆಂದು ಬಸವಳಿಯುತ್ತಿದೆ. ಕರಾವಳಿ, ಮಲೆನಾಡು ಬಾಗಗಳಲ್ಲೂ ಕೂಡ ತಾಪಮಾನ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇದೆಲ್ಲದರ ನಡುವೆ ರಾಜ್ಯದ ಕೆಲವೆಡೆ ಮಳೆಯ ಸಿಂಚನವಾಗತೊಡಗಿದೆ. ಹಾವೇರಿ, ಶಿವಮೊಗ್ಗ, ಹೊಸಪೇಟೆ, ಮಂಗಳೂರು ಸೇರಿ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿರುವುದು ಕೊಂಚ ನಿರಾಳತೆ ಮೂಡಿಸಿದೆ. ಏಪ್ರಿಲ್-ಮೇ ತಿಂಗಳಲ್ಲೂ ಉತ್ತಮ ಮಳೆ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Male nakshatragalu 2025- 2025ರ ಮಳೆ ನಕ್ಷತ್ರಗಳು | ಹೇಗಿದೆ ಈ ವರ್ಷದ ಮಳೆಗಾಲ?
ಈ ವರ್ಷ ಸಮೃದ್ಧ ಮುಂಗಾರು
ಮಾರ್ಚ್ 21ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ 2025ನೇ ಸಾಲಿನ ಹವಾಮಾನ ಪರಿಸ್ಥಿತಿ ಕುರಿತು ಸಚಿವ ಸಂಪುಟ ಉಪ ಸಮಿತಿ ನಡೆದಿದ್ದು; ಸದರಿ ಸಭೆಯಲ್ಲಿ ಅಧಿಕಾರಿಗಳು 2025ನೇ ಸಾಲಿನ ಮಾನ್ಸೂನ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳೆದ 2024ರ ಮುಂಗಾರು ಮಳೆಯಂತೆಯೇ 2025ರ ಮುಂಗಾರು ಮತ್ತು ಹಿಂಗಾರು ಮಳೆಗಳೆರಡೂ ಸಮೃದ್ಧವಾಗಲಿದ್ದು; ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಪೂರ್ವ ಮುಂಗಾರಿನಲ್ಲಿ ಉತ್ತರ ಕರ್ನಾಟಕ ಸೇರಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Zero Interest Crop Loan- ರೈತರಿಗೆ ₹5 ಲಕ್ಷ ಬಡ್ಡಿ ಇಲ್ಲದ ಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಹಿಂಗಾರು ಮಳೆ ಕೂಡ ಉತ್ತಮ
ಏಪ್ರಿಲ್-ಮೇ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ಆದರೆ, ಜೂನ್’ನಿಂದ ಸೆಪ್ಟೆಂಬರ್ ವರೆಗಿನ ಮಾನ್ಸೂನ್ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ಮಾತ್ರವಲ್ಲ ಸೆಪ್ಟೆಂಬರ್ ನಂತರದ ಹಿಂಗಾರಿನಲ್ಲೂ ಈ ವರ್ಷ ವಾಡಿಕೆಯ ಮಳೆ ನಿರೀಕ್ಷಿಸಬಹುದು ಎಂದು ಅಧಿಕಾರಿಗಳು ವಿವರಿಸಿದರು.
ಆದರೆ, ಬಿಸಿಲಿನ ತಾಪಮಾನ ಏಪ್ರಿಲ್-ಮೇ ತಿಂಗಳಲ್ಲೂ ಮುಂದುವರೆಯಲಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗಲಿದೆ. ಉಳಿದ ಇತರ ಜಿಲ್ಲೆಗಳಲ್ಲಿ ಸಾಮಾನ್ಯ ತಾಪಮಾನ ಇರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಸಿಗಲಿದೆ ಇ-ಸ್ವತ್ತು
ಕುಡಿಯುವ ನೀರಿಗೆ ಆದ್ಯತೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಪ್ರಮುಖ 14 ಜಲಾಶಯಗಳ ನೀರಿನ ಮಟ್ಟ ತೃಪ್ತಿಕರವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 280.02 ಟಿ.ಎಂ.ಸಿ ನೀರಿನ ಸಂಗ್ರಹಣೆ ಇತ್ತು. ಪ್ರಸ್ತುತ ಒಟ್ಟು 422.11 ಟಿ.ಎಂ.ಸಿ ನೀರಿನ ಸಂಗ್ರಹಣೆ ಇದೆ. ಬಿಸಿಲಿನ ಪ್ರಕೋಪಕ್ಕೆ ನೀರಿನ ನಷ್ಟ ಸಂಭವಿಸುವ ಅಪಾಯವಿದೆ.
ಈ ನೀರಿನ ಸಂಗ್ರಹಣೆಯನ್ನು ಬೇಸಿಗೆ ಬೆಳೆಗಳ ನೀರಾವರಿ ಅಗತ್ಯಕ್ಕಿಂತ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಸ್ತುತ ರಾಜ್ಯದ 12 ಜಿಲ್ಲೆಗಳ 115 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಬಾಡಿಗೆ ಟ್ಯಾಂಕರ್ ಮತ್ತು ಬೋರ್ವೆಲ್ಗಳ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bagar Hukum-ಬಗರ್‌ಹುಕುಂ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ವಿನಾಯಿತಿ