ನಿದ್ದೆಯು ಪ್ರತಿ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಒಬ್ಬ ವ್ಯಕ್ತಿಯ ದಿನ ಖುಷಿಯಾಗಿ ಶುರುವಾಗಬೇಕೆಂದರೆ ಆ ವ್ಯಕ್ತಿಗೆ ನಿದ್ದೆ ಸಂಪೂರ್ಣವಾಗಿರಬೇಕು. 

ಇತ್ತೀಚಿನ ವರ್ಷಗಳಲ್ಲಿ ಸರಿಯಾಗಿ ನಿದ್ರೆಯಿಲ್ಲದೆ ಅನೇಕರು ವಿವಿಧ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅವುಗಳ ಪಟ್ಟಿಯಲ್ಲಿ  ಆಲ್ಜೈಮರ್ಸ್, ಡಿಮೇನ್ಸಿಯಾ ಕೂಡ ಸೇರಿವೆ.

ನಿದ್ರಾ ಸಮಸ್ಯೆಯಿಂದಾಗಿ ಇಂದು ನಿದ್ರಾತಜ್ಞರು, ಚಿಕಿತ್ಸಕರಿಗೆ ಎಲ್ಲಿಲ್ಲದ ಬೇಡಿಕೆ. ನಿದ್ದೆ ಮಾಡಿಸಲೆಂದೇ ಸಾವಿರಾರು ಆ್ಯಪ್‌ಗಳು, ನಿದ್ರೆ ಅಳೆಯಲು ಕೈಗಡಿಯಾರ, ದಿಂಬಿನಡಿ ಇಡುವ ಸಾಧನಗಳು ಹುಟ್ಟಿಕೊಂಡಿವೆ.

ಅಮೆರಿಕಾದಲ್ಲಿ ಶೇ.35ರಷ್ಟು ಜನರಿಗೆ ನಿದ್ರೆಯ ಸಮಸ್ಯೆ ಇದೆ. ನಿದ್ರೆಯ ಕಾರಣಕ್ಕೇ ಹತ್ತು ಲಕ್ಷ ಕೋಟಿ ಡಾಲರ್‌ಗಳಷ್ಟು ಅಮೆರಿಕಾಗೆ ನಷ್ಟವಾಗುತ್ತಿದೆ ಎನ್ನಲಾಗುತ್ತಿದೆ.

ಚಿಂತೆ, ದುಗುಡ, ಒತ್ತಡದಿಂದಾಗಿ ಕೆಲವರಿಗೆ ನಿದ್ರಾಹೀನತೆಯ ಸಮಸ್ಯೆ ಅನುಭವಿಸಿದರೆ, ಮತ್ತೆ ಕೆಲವರಿಗೆ ಕೆಲಸದ ಬ್ಯೂಸಿ, ಅಧಿಕ ಚಟುವಟಿಕೆಯಿಂದಾಗಿ ಸರಿಯಾಗಿ ನಿದ್ರೆ ಮಾಡಲಾಗದ ದುಃಸ್ಥಿತಿ.

ಪ್ರತಿ ವ್ಯಕ್ತಿಯೂ ಸರಾಸರಿ ಒಂದನೇ ಮೂರು ಭಾಗದ ಆಯುಷ್ಯವನ್ನು ನಿದ್ದೆಯಲ್ಲಿಯೇ ಕಳೆಯುತ್ತಾನೆ. ನಾವು ನೂರು ವರ್ಷ ಬದುಕಿದರೆ ಅದರಲ್ಲಿ 36 ವರ್ಷಗಳು ನಿದ್ರೆಯಲ್ಲಿ ಕಳೆದಿರುತ್ತದೆ.

1-3 ವರ್ಷದ ಮಗುವಿಗೆ 11 ರಿಂದ 14 ಗಂಟೆ, 4-12 ವರ್ಷದವರಿಗೆ 9 ರಿಂದ 11 ಗಂಟೆ, ಹದಿಹರೆಯದವರಿಗೆ ಏಳು ಗಂಟೆ ನಿದ್ರೆ ಬೇಕು. ವೃದ್ಧರಿಗೆ 7 ರಿಂದ 9 ಗಂಟೆಗಳ ನಿದ್ದೆಯ ಅವಶ್ಯಕತೆ ಇದೆ ಎನ್ನುತ್ತದೆ `ನ್ಯು ಸೈನ್ಟಿಸ್ಟ್’ ವರದಿ.

ಸರಿಯಾಗಿ ನಿದ್ರೆ ಮಾಡುವಂತಾದರೆ, ಭ್ರಾಂತಿರೋಗವನ್ನು ಶೇ.50ರಷ್ಟು ಕಡಿಮೆ ಮಾಡಬಹುದು ಎಂಬುವುದು ಅಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದಿಂದ ಋಜುವಾತಾಗಿದೆ.

ನಿದ್ರೆಯಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ, ಜ್ಞಾಪಕಶಕ್ತಿ, ಜೀರ್ಣಶಕ್ತಿ, ಹೆಚ್ಚುತ್ತದೆ. ಮನಸ್ಸು ಸಂತೋಷಗೊಂಡು, ದೇಹವು ಚಟುವಟಿಕೆಯಿಂದ ಕೂಡಿರುತ್ತದೆ.

ಎಚ್ಚರವಿರಲಿ, ನಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅಂತ ನಿಗದಿತ ಅವಧಿಗಿಂತ ಹೆಚ್ಚು ನಿದ್ರಿಸಿದಲ್ಲಿ ದೇಹದಲ್ಲಿ ಆಲಸ್ಯ, ಮೈಕೈ ನೋವು, ನಿರಾಸಕ್ತಿ, ಸುಸ್ತು ಕಾಣಿಸಿಕೊಳ್ಳುತ್ತದೆ.

ಒಟ್ಟಾರೆ ನಿದ್ರೆಯಲ್ಲಿಯೇ ಸಮೃದ್ಧ ಆರೋಗ್ಯದ ಗುಟ್ಟು ಅಡಗಿದ್ದು; ನಿಗಧಿತ ಸಮಯ ನಿದ್ರೆ ಮಾಡಿದರೆ ಅರ್ಧ ಕಾಯಿಲೆಗಳೇ ವಾಸಿಯಾಗುತ್ತವೆ.