Krishi Bhagya Scheme : ಕೃಷಿ ಭಾಗ್ಯ ಯೋಜನೆಗೆ ಅರ್ಜಿ
ಮಳೆಯಾಶ್ರಿತ ರೈತರಿಗೆ ನೀರಾವರಿ ಸೌಕರ್ಯಕ್ಕೆ ಸರ್ಕಾರದ ಸಹಾಯಧನ
ಮಳೆಯಾಶ್ರಿತ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ‘ಕೃಷಿ ಭಾಗ್ಯ’ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಳೆಯ ನೀರನ್ನು ಸಂಗ್ರಹಿಸಿ ಕೃಷಿ ಉತ್ಪಾದನೆ, ಆದಾಯ ಹೆಚ್ಚಿಸುವ ಉದ್ದೇಶದಿಂದ ಸರಕಾರ ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದು; ಅರ್ಹ ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಕೃಷಿ ಭಾಗ್ಯ ಪ್ಯಾಕೆಜ್
ಈ ಯೋಜನೆಯಡಿ ಒಟ್ಟು ಆರು ಘಟಕಗಳನ್ನು ಕೃಷಿ ಭಾಗ್ಯ ಪ್ಯಾಕೆಜ್‌ನಲ್ಲಿ ರೈತರು ಅಳವಡಿಸಿಕೊಳ್ಳಬಹುದಾಗಿದೆ. ಘಟಕಗಳ ವಿವರ ಈ ಕೆಳಗಿನಂತಿದೆ:
- ಕ್ಷೇತ್ರ ಬದು ನಿರ್ಮಾಣ
- ಕೃಷಿ ಹೊಂಡ ನಿರ್ಮಾಣ
- ಕೃಷಿ ಹೊಂಡಕ್ಕೆ ಪಾಲಿಥೀನ್ ಹೊದಿಕೆ
- ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ
- ಡಿಸೇಲ್ ಪಂಪಸೆಟ್
- ಸ್ಪಿ೦ಕ್ಲರ್ ಘಟಕ
ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು
ಸಹಾಯಧನ ಎಷ್ಟು?
ಸಾಮಾನ್ಯ ವರ್ಗದ ರೈತರಿಗೆ ಶೇ.40 ರಿಂದ ಶೇ.90 ರವರೆಗೆ ಹಾಗೂ ಎಸ್ಸಿ/ಎಸ್ಪಿ ರೈತರಿಗೆ ಶೇ.50 ರಿಂದ ಶೇ.90ರವರೆಗೆ ಸಹಾಯಧನ ನೀಡಲಾಗುವುದು. ರೈತರು ಅರ್ಜಿಯನ್ನು ದಾಖಲಾತಿಗಳೊಂದಿಗೆ ಸಂಬ೦ಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ನೀಡಬಹುದು.
ನಿಗದಿಗಿಂತ ಹೆಚ್ಚು ಅರ್ಜಿ ಸ್ವೀಕೃತವಾಗಿದ್ದಲ್ಲಿ ನಿಯಮಾನುಸಾರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಜೇಷ್ಠತೆ ಅನುಸಾರ ಇಲಾಖೆಯ ಕೆ-ಕಿಸಾನ್ ತಂತ್ರಾ೦ಶದಲ್ಲಿ ನೋಂದಣಿ ಮಾಡಲಾಗುವುದು. ರೈತರ ಒಟ್ಟು ಹಿಡುವಳಿ ಕ್ಷೇತ್ರದ 1 ಸರ್ವೆ ನಂಬರ್‌ನಲ್ಲಿ ಕನಿಷ್ಠ 1 ಎಕರೆ ಜಮೀನು ಇರಬೇಕು.
ಈ ಹಿಂದೆ ಕೃಷಿಭಾಗ್ಯ, ವಿವಿಧ ಯೋಜನೆಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಲ್ಲಿ ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ. ಕೆ.ಕಿಸಾನ್ ತಂತ್ರಾ೦ಶದಲ್ಲಿ ನೋಂದಾಯಿಸಿದ ಅರ್ಹ ಅರ್ಜಿಗಳನ್ನು ಆಯ್ಕೆ ಮಾಡಿ ಕ್ಷೇತ್ರ ಪರಿಶೀಲನೆ ಕೈಗೊಂಡು ಅರ್ಹರಿಗೆ ಕಾರ್ಯಾದೇಶ ನೀಡಲಾಗುವುದು.
ಇದನ್ನೂ ಓದಿ: ಹೊಸ ವರ್ಷಕ್ಕೆ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹಧನ ಹೆಚ್ಚಳ
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು
- ಭರ್ತಿ ಮಾಡಿದ ಅರ್ಜಿ ನಮೂನೆ
- ರೈತರ ಭಾವ ಚಿತ್ರ
- ಎಫ್‌ಐಡಿ ನಂಬರ್
- ಪಹಣಿ ಪ್ರತಿ
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್‌ಬುಕ್
ಅರ್ಜಿ ಸಲ್ಲಿಕೆ ಹೇಗೆ?
ಆಯಾಯ ಜಿಲ್ಲೆಗಳ ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ವೀಕೃತವಾದ ಅರ್ಜಿಗಳ ಹಿರಿತನದ ಆಧಾರದ ಮೇಲೆ ಹಾಗೂ ಆಯಾ ಹೋಬಳಿಗೆ ನಿಗದಿಪಡಿಸಿದ ಗುರಿಯ ಆಧಾರದ ಮೇಲೆ ಯೋಗ್ಯ ರೈತರಿಗೆ ಯೋಜನೆಯ ವಿವಿಧ ಘಟಕಗಳಿಗೆ ಸಹಾಯಧ ನೀಡಲಾಗುವುದು.
ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ತರಬೇತಿ | ವಸತಿ, ಉಟೋಪಚಾರ ಸಂಪೂರ್ಣ ಉಚಿತ